ಬೆಂಗಳೂರು: ವಿಜಯಪುರದ ಬಳಿಕ ಈಗ ವಚನಕಾರ ಬಸವಣ್ಣನವರ ಕರ್ಮಭೂಮಿ ಎಂದೇ ಅರಿಯಲ್ಪಡುವ ಬೀದರ್‌ನಲ್ಲೂ ಸಾವಿರಾರು ಎಕರೆ ಭೂಮಿ ವಕ್ಫ್ ಕಬಳಿಸಿರುವುದು ಬಹಿರಂಗವಾಗಿದೆ. ಬೀದರ್‌ನಲ್ಲಿ ಬರೋಬ್ಬರಿ 13,295 ಎಕರೆ ಭೂಮಿ ವಕ್ಫ್ ಪಾಲಾಗಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಸಾವಿರಾರು ಎಕರೆ ರೈತರ ಜಮೀನಿನಲ್ಲಿ ವಕ್ಫ್ ಹೆಸರು ಸೇರಿಕೊಂಡಿದೆ. 13,295 ಎಕರೆ ಜಮೀನು ತನ್ನದು ಎಂದು ವಕ್ಫ್ ಬೋರ್ಡ್ ಅಧಿಕೃತ ದಾಖಲೆಯನ್ನು ನೀಡಿದೆ.
ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ ಭೂಮಿ ಈಗ ವಕ್ಫ್ ಆಸ್ತಿಯಾಗಿ ಪಹಣಿಯಲ್ಲಿ ಬದಲಾಗಿದೆ. ವಕ್ಫ್ ಬೋರ್ಡ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 13,295 ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಜಿಲ್ಲೆಯಲ್ಲಿ 2,747 ವಕ್ಫ್ ಸಂಸ್ಥೆಗಳು ಹಾಗೂ 3,822 ವಕ್ಫ್ ಆಸ್ತಿಗಳ ಸಂಖ್ಯೆ ಸೇರಿ ಒಟ್ಟು 13,295 ಎಕರೆ ಜಮೀನು ವಕ್ಫ್ ಆಸ್ತಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 217 ಎಕರೆಯನ್ನು ವಕ್ಫ್ ಬೋರ್ಡ್ ತನ್ನ ಸುಪರ್ದಿಗೆ ತೆಗೆದುಕೊಂಡು ಬೇಲಿ ಹಾಕಿದ್ದು, ಜಿಲ್ಲೆಯ ಪ್ರಮುಖ ಆಸ್ತಿಗಳ ಮೇಲೆ ವಕ್ಫ್ ಕಣ್ಣು ಹಾಕಿದೆ.
ಬೀದರ್ ತಾಲೂಕಿನಲ್ಲಿ 5,232 ಎಕರೆ, ಔರಾದ್‌ನಲ್ಲಿ 331 ಎಕರೆ, ಹುಮ್ನಾಬಾದ್‌ನಲ್ಲಿ 2,798 ಎಕರೆ, ಬಸವಕಲ್ಯಾಣದಲ್ಲಿ 3,292 ಎಕರೆ ಹಾಗೂ ಭಾಲ್ಕಿಯಲ್ಲಿ 1,635 ಎಕರೆ ಜಮೀನು ವಕ್ಫ್ ಆಸ್ತಿ ಇದೆ ಎಂದು ವಕ್ಫ ಮಂಡಳಿ ಜಿಲ್ಲಾ ಕಚೇರಿಯ ಸರ್ಕಾರಿ ದಾಖಲೆಯಲ್ಲಿ ನಮೂದಿಸಿದೆ. ನಾವು 50 ವರ್ಷದಿಂದ ಉಳುಮೆ ಮಾಡುತ್ತಿದ್ದ ಜಮೀನು ಏಕಾಏಕಿ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ಬದಲಾಗಿದೆ. ಇಡೀ ಊರಿಗೇ ಊರು, ಸ್ಮಾರಕಗಳು, ರೈತರ ಜಮೀನುಗಳು, ಸರ್ಕಾರಿ ಜಾಗಗಳು, ಮಠ, ಮಂದಿರಗಳು ವಕ್ಫ್‌ಗೆ ಸೆರ್ಪಡೆಯಾಗಿವೆ. ಶೀಘ್ರವೇ ವಕ್ಫ್ ಹೆಸರು ತೆಗೆದು ಹಾಕದಿದ್ದರೆ ಹೋರಾಟಕ್ಕೆ ಇಳಿಯುತ್ತೇವೆ ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮವೊಂದರಲ್ಲೇ 200 ರೈತರ 960 ಎಕರೆ ಭೂಮಿ 2013ರಲ್ಲಿ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ಬದಲಾಗಿದೆ. 50 ವರ್ಷದಿಂದ ಈ ಗ್ರಾಮದ ರೈತರು ಇದೇ ಜಮೀನುಗಳಲ್ಲಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದು, ಈಗಾ ಏಕಾಏಕಿ ವಕ್ಫ್‌ಗೆ ಸೇರ್ಪಡೆಯಾಗಿದೆ. ಬೀದರ್ ತಾಲೂಕಿನ ಧರ್ಮಪುರ ಗ್ರಾಮದಲ್ಲಿ 26 ಎಕರೆ ಜಮೀನಲ್ಲಿರುವ ಇಡೀ ಗ್ರಾಮವೇ ವಕ್ಫ್‌ಗೆ ಸೇರ್ಪಡೆಯಾಗಿದೆ. ಇದರಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿ, ಮಠ, ಮಂದಿಗಳು ಇದ್ದು, ಇಡೀ ಗ್ರಾಮದ ಜನರು ಕಂಗಾಲಾಗಿದ್ದಾರೆ. ಔರಾದ್ ತಾಲೂಕಿನ ತೋರಣ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಈಗಾ ವಕ್ಫ್‌ಗೆ ಸೇರಿದೆ.
ಐತಿಹಾಸಿಕ ಬೀದರ್ ಕೋಟೆಯ ಸೋಲಾ ಕಂಬ, ಅಷ್ಟೂರಿನ ಐತಿಹಾಸಿಕ 14 ಗುಂಬಜ್‌ಗಳು, ಬರೀದ್‌ಶಾಯಿ ಗುಂಬಜ್, ಶಬಲ್ ಬರೀದ್ ಗುಂಬಜ್‌ಗಳು ವಕ್ಫ್‌ಗೆ ಸೇರ್ಪಡೆಯಾಗಿವೆ. 1974ರಲ್ಲಿ ಗೆಜೆಟ್ ನೋಟಿಫಿಕೇಶನ್ ಬಳಿಕ ಐತಿಹಾಸಿಕ ಸ್ಮಾರಕಗಳನ್ನು ವಕ್ಫ್‌ಗೆ ಸೇರಿಸಲಾಗಿದೆ. ಪುರಾತತ್ವ ಇಲಾಖೆಯ ಅಡಿಯಲ್ಲಿರುವ ಈ ಆಸ್ತಿಗಳು ಏಕಾಏಕಿ ವಕ್ಫ್‌ಗೆ ಹೇಗೆ ಸೆರ್ಪಡೆಯಾಗಿವೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ರೈತರ ಸಾವಿರಾರು ಎಕರೆ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಆಸ್ಪತ್ರೆಗಳು, ಇಡೀ ಗ್ರಾಮವನ್ನೇ ವಕ್ಫ್‌ಗೆ ಸೇರಿಸಿದ್ದು ಜನರನ್ನು ರೊಚ್ಚಿಗೇಳುವಂತೆ ಮಾಡಿದೆ.