ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ

ಉಪಚುನಾವಣೆ ಸೋಲಿನ ವಾಸನೆ ಬಡಿದು ಬಡಬಡಿಕೆ ಎಂದು ಟೀಕೆ

ಕಾರ್ಕಳ : ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೀತಿಗೊಂಡಿದ್ದಾರೆ. ಪೀಠದಿಂದ ಪತನಗೊಳ್ಳುವ ಕನಸು ಬೀಳುತ್ತಿರುವುದರಿಂದ ಪದೇಪದೆ ಬೆಚ್ಚಿ ಬೀಳುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿದ ಮುಖ್ಯಮಂತ್ರಿ ಗಾದಿಯನ್ನು ತಮ್ಮದೇ ಪಕ್ಷದವರು ಇನ್ನು ಕೆಲವೇ ದಿನಗಳಲ್ಲಿ ಕಸಿದುಕೊಳ್ಳುತ್ತಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯರನ್ನು ಬೆದರಿಸಲು ಹೊರಟಿದ್ದಾರೆ ಎಂದು ಶಾಸಕ ಸುನೀಲ್‌ ಕುಮಾರ್‌ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನ ಒಬ್ಬೊಬ್ಬ ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರೂ. ಆಮಿಷವೊಡ್ಡಿದೆ ಮತ್ತು ನನ್ನನ್ನು ಮುಟ್ಟಿದರೆ ಜೋಕೆ ಎಂದು ಸಿದ್ದರಾಮಯ್ಯನವರು ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಸುನಿಲ್‌ ಕುಮಾರ್‌, ಶಾಸಕರಿಗೆ ತಲಾ 50 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಸಿದ್ದರಾಮಯ್ಯನವರು ಹೇಳಿರುವುದು ಹಸಿ ಸುಳ್ಳು. ಬಹುಶಃ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಶಾಸಕರಿಗೆ ಬಿಜೆಪಿ ಹೆಸರಿನಲ್ಲಿ ಕೋಟಿ ರೂ. ಆಮಿಷ ನೀಡುತ್ತಿರಬೇಕು. ಕಳೆದ ಒಂದೂವರೆ ವರ್ಷದಿಂದ ಅನುದಾನವಿಲ್ಲದೆ ತತ್ತರಿಸಿ ಹೋಗಿರುವ ಕಾಂಗ್ರೆಸ್ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕಿದ್ದರೆ ಸಿದ್ದರಾಮಯ್ಯನವರಿಗೆ ಈಗ ಇದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲದಂತೆ ತೋರುತ್ತಿದೆ ಎಂದಿದ್ದಾರೆ.































 
 

ಅದೆಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನು ಮುಟ್ಟಿದರೆ‌ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ ಎಂದು ಅವರು ಬಿಕ್ಕಳಿಸಿರುವುದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಜನರನ್ನು ಎತ್ತಿಕಟ್ಟುವ ಲೆಕ್ಕಾಚಾರ. ಏಕೆಂದರೆ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನೀಡಿದ ಗದ್ದುಗೆಯ ಗಡುವು ಮಗಿಯುತ್ತಾ ಬಂದಿದೆ. ಯಾರಾದರೂ ತಮ್ಮನ್ನು ಬಡಿದೆಬ್ಬಿಸುತ್ತಾರೆಂಬ ಭಯಕ್ಕೆ ಈಗ ಆಪರೇಷನ್ ಕಮಲದ ಭೂತವನ್ನು ಮುಂದೆ ಬಿಟ್ಟಿದ್ದಾರಷ್ಟೆ ಎಂದಿದ್ದಾರೆ.

ಬಿಜೆಪಿ ಸಿದ್ದರಾಮಯ್ಯನವರ ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ಬೆದರುವುದಿಲ್ಲ. ತಾನು ರಾಜ್ಯದ ಮಹಾನ್‌ ನಾಯಕ, ತಾನು ಹೇಳಿದ ಕೂಡಲೇ ಜನರು ಬೀದಿಗಿಳಿದು ದಂಗೆಯೆಬ್ಬಿಸುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರನ್ನು ಆವರಿಸಿಕೊಂಡಿದೆ. ಭ್ರಷ್ಟಾಚಾರದ ಕಳಂಕವನ್ನು ಮೈಯೆಲ್ಲ ಮೆತ್ತಿಸಿಕೊಂಡಿರುವ, ಮುಸ್ಲಿಮರ ಓಲೈಕೆಗೆ ಬಡಪಾಯಿ ರೈತರ ಜಮೀನನ್ನೆ ಕಸಿದುಕೊಳ್ಳುವ ಹೀನಮಟ್ಟಕ್ಕೆ ಇಳಿದಿರುವ ಸಿದ್ದರಾಮಯ್ಯ ಒಮ್ಮೆ ತೊಲಗಿದರೆ ಸಾಕು ಎಂದು ಜನ ಕಾಯುತ್ತಿದ್ದಾರೆ ಎಂಬ ವಾಸ್ತವ ಅವರಿಗೆ ಇನ್ನೂ ಗೊತ್ತಾಗಿಲ್ಲ ಅಥವಾ ಗೊತ್ತಾಗಿದ್ದರೂ ತಮ್ಮ ಪಕ್ಷದವರನ್ನು ನಂಬಸಿಲು ಇಂಥ ಪೊಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸುನಿಲ್‌ ಕುಮಾರ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top