ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳ ನೀರು ಪೂರೈಕೆಯಾಗುವ ನಗರ, ಪಟ್ಟಣಗಳ ಜನರು ಬಳಸುವ ನೀರಿನ ಮೇಲೆ ಮೇಲ್ತೆರಿಗೆ (ಸೆಸ್) ಹಾಕಲು ಸರಕಾರ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರೇ ಆದೇಶ ಹೊರಡಿಸಿದ್ದಾರೆ.
ಪಶ್ಚಿಮ ಘಟ್ಟ ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರಕಟಣೆ ನೀಡಿದ್ದಾರೆ.

ಪಶ್ಚಿಮ ಘಟ್ಟ ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮ ಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ.
ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮ ಘಟ್ಟ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್‌ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪುನಿಧಿ ಸ್ಥಾಪನೆ ಸರ್ಕಾರ ಚಿಂತನೆ ನಡೆಸಿದೆ. ಈ ಹಣವನ್ನು ಪಶ್ಚಿಮ ಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು. ಜೊತೆಗೆ ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಈ ಹಣ ಬಳಸಬಹುದು. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ನೀರಿನ ಬಿಲ್ ಜೊತೆಯಲ್ಲಿ ಬಳಕೆದಾರರು 2 ಅಥವಾ 3 ರೂ. ಪಾವತಿಸಬೇಕು. ಈ ಹೆಚ್ಚುವರಿ ಹಣವನ್ನು ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ಮಹತ್ವದ ಅರಿವು ಮೂಡಿಸಲು ಬಳಕೆ ಮಾಡಲಾಗುತ್ತದೆ. ಹೀಗೆ ಸಂಗ್ರಹವಾಗುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುವುದಿಲ್ಲ ಎಂದು ಸಚಿವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.