ಕೊಲೆ ಮಾಡಿ ಬಟ್ಟೆ ಬದಲಾಯಿಸಿ ಮರಳಿ ಅಲ್ಲಿಗೆ ಬಂದಿದ್ದ ಶೂಟರ್
ಮುಂಬಯಿ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್ ಎಂಬಾತನನ್ನು ಮುಂಬಯಿ ಪೊಲೀಸರು ಇತ್ತೀಚೆಗೆ ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಈತನ ವಿಚಾರಣೆಯಿಂದ ಕೊಲೆಯ ಸಂಚಿನ ರಹಸ್ಯಗಳು ಬಯಲಾಗುತ್ತಿವೆ. ಸಿದ್ದಿಕಿಗೆ ಗುಂಡಿಕ್ಕಿದ ಬಳಿಕ ಈತ ಅವರು ಸತ್ತಿರುವುದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಆಸ್ಪತ್ರೆ ಎದುರು ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾದು ಕುಳಿತಿದ್ದನಂತೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಾಡಿದ ಈ ಹತ್ಯೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಮುಖ್ಯ ಆರೋಪಿ ಶಿವಕುಮಾರ್ ಗೌತಮ್ ಹತ್ಯೆ ಎಸಗಿದ ಬಳಿಕ ಮುಂಬಯಿಯಿಂದ ಪುಣೆಗೆ ಹೋಗಿ ಅಲ್ಲಿ ಕೆಲವು ದಿನ ತಂಗಿದ ಬಳಿಕ ನೇಪಾಳದ ಮೂಲಕ ವಿದೇಶಕ್ಕೆ ಪಲಾಯನ ಮಾಡಲು ಹವಣಿಸಿದ್ದ. ಈ ಸಂದರ್ಭದಲ್ಲಿ ನೇಪಾಳದ ಗಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಅಕ್ಟೋಬರ್ 12ರಂದು ರಾತ್ರಿ ಸಿದ್ದಿಕಿ ಅವರನ್ನು ಅವರ ಮಗ ಜೀಶಾನ್ ಕಚೇರಿ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಎದೆಗೆ ಎರಡು ಗುಂಡುಗಳು ಹೊಕ್ಕಿದ್ದವು, ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದಿದ್ದರು. ರಾತ್ರಿ 9.11ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು, ಶೂಟ್ ಮಾಡಿ ಸ್ವಲ್ಪ ಸಮಯದ ನಂತರ ಆರೋಪಿ ಶಿವಕುಮಾರ್ ಗೌತಮ್ ಬಟ್ಟೆ ಬದಲಾಯಿಸಿ ಕೊಲೆ ಮಾಡಿದ ಸ್ಥಳಕ್ಕೆ ವಾಪಸು ಬಂದಿದ್ದ. ನಂತರ ಲೀಲಾವತಿ ಆಸ್ಪತ್ರೆಗೆ ತೆರಳಿ ಅರ್ಧ ತಾಸಿಗೂ ಹೆಚ್ಚು ಕಾಲ ಅಲ್ಲಿಯೇ ನಿಂತು ಸಾವನ್ನು ದೃಢಪಡಿಸಿಕೊಂಡಿದ್ದ ಎನ್ನುವ ವಿಚಾರವನ್ನು ಆತನೇ ಬಾಯ್ಬಿಟ್ಟಿದ್ದಾನೆ.
ಸಹಾಯಕರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರನ್ನು ಉಜ್ಜಯಿನಿ ರೈಲ್ವೇ ನಿಲ್ದಾಣದಲ್ಲಿ ಆತ ಭೇಟಿಯಾಗಬೇಕಿತ್ತು, ಅಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ ಅವನನ್ನು ವೈಷ್ಣೋದೇವಿಗೆ ಕರೆದೊಯ್ಯಲಿದ್ದ. ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಪ್ಲಾನ್ ವಿಫಲವಾಯಿತು.
ಪ್ರಮುಖ ಶೂಟರ್ ಶಿವಕುಮಾರ್ ಗೌತಮ್‌ನನ್ನು ಪತ್ತೆಹಚ್ಚಲು ಪೊಲೀಸರಿಗೆ ನಾಲ್ವರು ಆರೋಪಿಗಳ ಸಂಭಾಷಣೆ ಸಹಾಯ ಮಾಡಿತ್ತು.
ಗೌತಮ್ ಮತ್ತು ಧರ್ಮರಾಜ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಂದ್ರ ಪ್ರತಾಪ್ ಸಿಂಗ್‌ನನ್ನು ಮುಂಬಯಿ ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನೇಪಾಳದ ಗಡಿಯ ಸಮೀಪ ಉತ್ತರ ಪ್ರದೇಶದ ನಾನ್ಪಾರಾ ಪ್ರದೇಶದಲ್ಲಿ ಭಾನುವಾರ ಬಂಧಿಸಿದೆ.