ಶಬರಿಮಲೆ : ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ನ.15ರಂದು ತೆರೆಯಲಾಗುವುದು. ನ.16ರಿಂದ ಭಕ್ತರಿಗೆ ಅಯ್ಯಪ್ಪನ ದರ್ಶನ ಲಭ್ಯವಾಗಲಿದೆ. ಈ ಋತುವಿನ ಯಾತ್ರೆಗಾಗಿ ಅನೇಕ ಬದಲಾವಣೆಗಳೊಂದಿಗೆ ಕೇರಳ ಸರಕಾರ ಸರ್ವ ಸಿದ್ಧತೆಗಳನ್ನು ನಡೆಸಿದೆ.
ನಾಳೆ ಸಂಜೆ 4 ಗಂಟೆಗೆ ಮುಖ್ಯಮೇಲ್‌ಶಾಂತಿ ಪಿ.ಎನ್.ಮಹೇಶ್ ನಂಬೂದಿರಿಯವರು ಶಬರಿಮಲೆ ಗರ್ಭಗೃಹದ ಬಾಗಿಲು ತೆರೆದು ಪೂಜೆ ನೆರವೇರಿಸುವುದರೊಂದಿಗೆ ಈ ವರ್ಷದ ಯಾತ್ರೆ ವಿದ್ಯುಕ್ತವಾಗಿ ಆರಂಭವಾಗಲಿದ್ದು ನಂತರ 62 ದಿನ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಲಿದ್ದಾರೆ.
ಶನಿವಾರ ನಸುಕಿನ 3 ಗಂಟೆಗೆ ನೂತನ ಮೇಲ್‌ಶಾಂತಿ ಎಸ್. ಅರುಣ್ ಕುಮಾರ್ ನಂಬೂದಿರಿ ದೇಗುಲದ ಮುಖ್ಯ ಬಾಗಿಲನ್ನು ತೆರೆಯುವುದರೊಂದಿಗೆ ಭಕ್ತರು 18 ಮೆಟ್ಟಿಲು ಏರಿ ಅಯ್ಯಪ್ಪನ ದರ್ಶನ ಪಡೆಯುವ ಪ್ರಕ್ರಿಯೆ ಶುರುವಾಗುತ್ತದೆ. ಡಿ.26ರಂದು ಮಂಡಲ ಪೂಜೆ ನಡೆದ ಬಳಿಕ ಐದು ದಿನಗಳ ಬಿಡುವು ಇರಲಿದೆ. ಮಕರ ಸಂಕ್ರಾತಿ ದಿನವಾದ ಜ.14ರಂದು ಮಕರ ಜ್ಯೋತಿ ದರ್ಶನವಾಗಲಿದೆ.
ಈ ಸಲ ವರ್ಚುವಲ್ ಬುಕ್ಕಿಂಗ್ ಕಡ್ಡಾಯಗೊಳಿಸಲಾಗಿದ್ದು, ವರ್ಚುವಲ್ ಬುಕ್ಕಿಂಗ್ ಮಾಡಿದ 70 ಸಾವಿರ ಮತ್ತು ಸ್ಪಾಟ್ ಬುಕ್ಕಿಂಗ್ ಮಾಡಿದ 10 ಸಾವಿರ ಸೇರಿ ದಿನಕ್ಕೆ 80 ಸಾವಿರ ಭಕ್ತರಿಗೆ ಮಾತ್ರ ಹದಿನೆಂಟು ಮೆಟ್ಟಿಲು ಏರಿ ಅಯ್ಯಪ್ಪನ ದರ್ಶನ ಮಾಡಲು ಅವಕಾಶ ಸಿಗಲಿದೆ. ನಿಮಿಷಕ್ಕೆ 75 ಭಕ್ತರಂತೆ 18 ಮೆಟ್ಟಿಲು ಏರಲು ಅವಕಾಶ ಕೊಡಲಾಗುವುದು. ದಿನದ 18 ತಾಸು ನಿರಂತರವಾಗಿ ಭಕ್ತರನ್ನು ಕ್ಷೇತ್ರಕ್ಕೆ ಬಿಡಲಾಗುವುದು.
ಸ್ಟೀಲ್ ಬಾಟಲಿಗಳಲ್ಲಿ ಕುಡಿಯಲು ಶುದ್ಧವಾದ ನೀರು, ಕೊಳವೆಗಳ ಮೂಲಕ ಬಿಸಿನೀರು ಪೂರೈಕೆ, ಏಕಕಾಲಕ್ಕೆ 16 ಸಾವಿರ ಭಕ್ತರು ವಿಶ್ರಾಂತಿ ಪಡೆಯಲು ಟೆಂಟ್‌ಗಳ ವ್ಯವಸ್ಥೆ, ಪಾರ್ಕಿಂಗ್, ಸಾರಿಗೆ ಸೇರಿದಂತೆ ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ದೇವಸ್ವಂ ಬೋರ್ಡ್ ಮಾಡಿದೆ.
ಧಾರಾಳ ಅರವಣ, ಅಪ್ಪಂ ಪ್ರಸಾದ
ಈ ಸಲ ಭಕ್ತರಿಗೆ ಶಬರಿಮಲೆಯ ಪವಿತ್ರ ಪ್ರಸಾದವಾಗಿರುವ ಅರವಣ ಪಾಯಸಂ ಮತ್ತು ಅಪ್ಪಂ ಧಾರಾಳವಾಗಿ ಸಿಗಲಿದೆ. ಯಾವುದೇ ಮಿತಿಯಿಲ್ಲದೆ ಅರವಣ ಪಾಯಸಂ ಮತ್ತು ಅಪ್ಪಂ ಪ್ರಸಾದ ಒದಗಿಸಲು ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಂತೆಯೇ ಎಲ್ಲ ಹೋಟೆಲ್‌ಗಳಲ್ಲಿ ಆಹಾರ-ಪಾನೀಯಗಳ ದರ ಪಟ್ಟಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.