ಸರಕಾರದ ಇಮೇಜ್ ಸುಧಾರಣೆಗೆ 7-8 ಸಚಿವರನ್ನು ಕೈಬಿಡಲು ಚಿಂತನೆ
ಬೆಂಗಳೂರು : ಉಪಚುನಾವಣೆ ಮುಗಿದ ಬಳಿಕ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿ ಸರಕಾರದ ಇಮೇಜ್ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡಲಾರಂಭಿಸಿದೆ. ಬರೀ ಒಂದೂವರೆ ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಸರಕಾರ ಇನ್ನಿಲ್ಲದ ಹಿನ್ನಡೆಯನ್ನು ಅನುಭವಿಸಿದೆ. ಭ್ರಷ್ಟಾಚಾರದ ಕಳಂಕ ಸರಕಾರಕ್ಕೆ ಮೆತ್ತಿಕೊಂಡಿದ್ದು, ಹಲವು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ನಿಷ್ಕ್ರಿಯ ಮತ್ತು ಆರೋಪ ಹೊತ್ತಿರುವ ಸಚಿವರನ್ನು ಬದಲಾಯಿಸಿ ಆಡಳಿತವನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದ್ದು, ಈ ಉದ್ದೇಶಕ್ಕಾಗಿ ಉಪಚುನಾವಣೆ ಮುಗಿದ ಕೂಡಲೇ ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಭೇಟಿ ಆಗಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇದಲ್ಲದೆ ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆಯಲ್ಲಿ 900 ಕೋ. ರೂ. ಹಗರಣ ಸೇರಿದಂತೆ ಆರೋಪಗಳಿಂದ ಸರಕಾರ ಜರ್ಜರಿತವಾಗಿದೆ. ನಿತ್ಯ ವಿಪಕ್ಷಗಳು ಆರೋಪ, ಹೋರಾಟಗಳನ್ನು ಮಾಡುತ್ತಿದ್ದು, ಅವುಗಳಿಗೆ ಕೌಂಟರ್ ನೀಡುವುದರಲ್ಲೇ ಸರಕಾರದ ಸಮಯ ಕಳೆದಹೋಗುತ್ತಿದೆ. ಇನ್ನೂ ಮೂರೂವರೆ ವರ್ಷದ ಆಡಳಿತ ಬಾಕಿಯಿರುವುದರಿಂದ ಇಮೇಜ್ ಸುಧಾರಣೆ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಸಚಿವರ ಹೇಳಿಕೆಗಳೂ ಸರ್ಕಾರಕ್ಕೆ ಸಂಕಷ್ಟ ತರುತ್ತಿವೆ. ಆಡಳಿತ ಯಂತ್ರ ಸುಸೂತ್ರವಾಗಿ ನಡೆಸಲು ಸಂಪುಟದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ, ಕೆಲವು ಸಚಿವರನ್ನು ಕೈ ಬಿಡಬಹುದು ಎಂದು ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ಹಣೆಪಟ್ಟಿ ಹೊತ್ತ, ವಿವಾದಗಳನ್ನು ಎಳೆದುಕೊಂಡು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ 7-8 ಸಚಿವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ. ಡಿಸೆಂಬರ್ ಮೊದಲ ಇಲ್ಲವೇ ಎರಡನೇ ವಾರ ಸಂಪುಟ ಪುನಾರಚನೆ ಮಾಡಿ, ಆಡಳಿತಕ್ಕೆ ಚುರುಕು ನೀಡಲಾಗುತ್ತಿದೆ. ಇದರಿಂದ ಸರ್ಕಾರದಲ್ಲಿ ಅಸಮಾಧಾನದ ಹೊಗೆ ಸೃಷ್ಟಿಯಾಗಬಹುದು, ಆದರೆ ಅವರಿಗೆ ಬೇರೆ ಹುದ್ದೆಗಳನ್ನು ನೀಡಿ ಸಮಾಧಾನಿಸಬಹುದು ಎಂದು ತೀರ್ಮಾನಿಸಲಾಗಿದೆ. ಈ ಕುರಿತು ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಉಪಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಕೇಂದ್ರ ವರಿಷ್ಠರು ಚರ್ಚಿಸಲಿದ್ದಾರೆ. ಯಾರನ್ನು ಸಂಪುಟದಿಂದ ಕೈ ಬಿಡಬೇಕು. ಯಾರಿಗೆ ಮಣೆ ಹಾಕಬೇಕು. ಆಡಳಿತವು ಯಾವುದೇ ಆರೋಪ ಎದುರಿಸದೇ ಹೇಗೆ ಕಾರ್ಯನಿರ್ವಹಿಸಬೇಕು ಎಂಬೆಲ್ಲದರ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆರ್.ಬಿ. ತಿಮ್ಮಾಪುರ, ಎಸ್.ಎಸ್.ಮಲ್ಲಿಕಾರ್ಜುನ್, ಬೋಸರಾಜು, ಕೆ.ಎನ್. ರಾಜಣ್ಣ ಸೇರಿದಂತೆ ಹೆಚ್ಚು ಸಕ್ರಿಯರಲ್ಲದ ಏಳೆಂಟು ಸಚಿವರಿಗೆ ಕೋಕ್ ನೀಡುವ ಸಾಧ್ಯತೆ ಇದೆ. ಆರ್.ಬಿ ತಿಮ್ಮಾಪುರ ಸಚಿವರಾಗಿರುವ ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿಪಕ್ಷಗಳು ಅವರ ರಾಜೀನಾಮೆ ಪಡೆಯುವಂತೆ ಒತ್ತಡ ಹಾಕುತ್ತಿವೆ. ಇನ್ನೂ ಕೆಲ ಸಚಿವರು ವಿವಾದಿತ ಹೇಳಿಕೆಗಳಿಂದ ಸರ್ಕಾರಕ್ಕೆ ನಿರಂತರವಾಗಿ ಮುಜುಗರ ತರುತ್ತಿದ್ದಾರೆ. ಇಲಾಖೆ ಕಾರ್ಯದಲ್ಲಿ ಸಕ್ರಿಯವಾಗಿಲ್ಲದವರು ಇದ್ದಾರೆ. ಹೀಗೆ ನಿಷ್ಕ್ರೀಯವಾಗಿರುವವರನ್ನು ಗುರುತಿಸಿ, ಸಭೆಯಲ್ಲಿ ಚರ್ಚಿಸಿ ಸಂಪುಟದಿಂದ ಕೈ ಬಿಡಲು ತೀರ್ಮಾನಿಸಲಾಗಿದೆ.