ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ ಟ್ರಸ್ಟ್ ಕಚೇರಿಯ ಮೇಲ್ಭಾಗದಲ್ಲಿ ನೂತನ ಸಭಾಂಗಣ ನಿರ್ಮಾಣದ ಕಾಮಗಾರಿಗೆ ಚಾಲನೆ ಹಾಗೂ ಟ್ರಸ್ಟ್ ಕಾರ್ಯಾಲಯದ ಉದ್ಘಾಟನೆ ಬುಧವಾರ ನಡೆಯಿತು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕಾರ್ಯಾಲಯವನ್ನು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ನಮ್ಮ ಸಮಾಜ ಎಂದು ಬಾಯಲ್ಲಿ ಹೇಳಿಕೊಳ್ಳುವುದು ಮಾತ್ರವಲ್ಲ. ಬದಲಾಗಿ ಹೃದಯದಿಂದ ಬರಬೇಕು. ಟ್ರಸ್ಟ್ ನ ವತಿಯಿಂದ ಇಚ್ಲಂಪಾಡಿಯಲ್ಲಿ ಗ್ರಾಮ ಸಮಿತಿ ಮಾಡುವಲ್ಲಿ ಮೂಲ ಕಾರಣ ಪುತ್ತೂರಿನವರು. ಈ ನಿಟ್ಟಿನಲ್ಲಿ ಇಂದು ದಶಮಾನೋತ್ಸವ ಕಾರ್ಯಾಲಯದ ಉದ್ಘಾಟನೆ ನೆರವೇರಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಒಕ್ಕಲಿಗ ಸಮುದಾಯದವರಿಗೆ ಹಾಗೂ ಟ್ರಸ್ಟ್ ನ ಯಾವುದೇ ಕೆಲಸ ಕಾರ್ಯಗಳಿಗೆ ಸಹಾಯ ಮಾಡಲು ನಾವೆಲ್ಲರೂ ಸಿದ್ಧರಿರಬೇಕು ಎಂದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಕಡಬ, ಪುತ್ತೂರು, ವಿಟ್ಲ ಸೇರಿದಂತೆ 68 ಗ್ರಾಮಗಳಲ್ಲಿ 64 ಸ್ವಸಹಾಯ ಟ್ರಸ್ಟ್ ಗಳಿವೆ. ಇದೀಗ ಟ್ರಸ್ಟ್ ಮೂಲಕ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯ ಎದುರಿನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ನೂತನ ಸಭಾಂಗಣ ನಿರ್ಮಿಸಲು ಇಂದು ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸಭಾಭವನದ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಗೌಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾಣ, ಹಿರಿಯರಾದ ಪೂವಪ್ಪ ಗೌಡ, ನಾಗಪ್ಪ ಬೊಮ್ಮೆಟ್ಟಿ, ರವಿಚಂದ್ರ, ಟ್ರಸ್ಟ್ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಪಟೇಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸಭಾಭವನ ನಿರ್ಮಾಣದ ಸ್ಥಳದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಿ, ಸಭಾಭವನ ಯಾವುದೇ ಅಡೆತಡೆಯಿಲ್ಲದೆ ಶೀಘ್ರ ನಿರ್ಮಾಣ ಆಗುವಂತೆ ಪ್ರಾರ್ಥಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಗೌಡ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು.