ಕೊನೇ ಕ್ಷಣದವರೆಗೂ ಮತದಾರರನ್ನು ಒಲಿಸಲು ಕಸರತ್ತು ಮಾಡಿದ ಪಕ್ಷಗಳು
ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಶಾಸಕರು ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಬಂದಿದೆ. ಮೂರೇ ಕ್ಷೇತ್ರವಾಗಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಹೋರಾಟದ ಪರಿಣಾಮವಾಗಿ ಈ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
ಹಗರಣಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ತನ್ನ ಜನಪ್ರಿಯತೆ ಇನ್ನೂ ಕುಸಿದಿಲ್ಲ ಎನ್ನುವುದನ್ನು ಈ ಉಪಚುನಾವಣೆಯ ಮೂರೂ ಸ್ಥಾನಗಳನ್ನು ಗೆದ್ದು ನಿರೂಪಿಸಬೇಕಾಗಿದೆ. ಅಂತೆಯೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವುದರಿಂದ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೋರಾಡಿಔೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳನ್ನು ಉಳಿಸಿಕೊಂಡು ಜೊತೆಗೆ ಕಾಂಗ್ರೆಸ್ ಕೈಯ್ಯಲಿರುವ ಸಂಡೂರನ್ನು ಕಸಿದುಕೊಂಡರೆ ಸರ್ಕಾರಕ್ಕೆ ಭರ್ಜರಿ ಹೊಡೆತ ನೀಡಿದಂತಾಗುತ್ತದೆ ಎಂಬ ಉತ್ಸಾಹದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಇದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ಗೆ ಚನ್ನಪಟ್ಟಣ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್ ಹಾಗೂ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚನ್ನಪಟ್ಟಣದಲ್ಲಿ ಒಟ್ಟು 2,32,949 ಮತದಾರರಿದ್ದು, ಈ ಪೈಕಿ 1,12,324 ಪುರುಷ ಮತದಾರರು, 1,20,617 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 276 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಚನ್ನಪಟ್ಟಣದಲ್ಲಿ 1.05 ಲಕ್ಷದಷ್ಟಿರುವ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದೆ. 40 ಸಾವಿರ ಪರಿಶಿಷ್ಟ ಪಂಗಡ, 32 ಸಾವಿರ ಮುಸ್ಲಿಂ, 21 ಸಾವಿರ ಹಿಂದುಳಿದ ವರ್ಗ, 8 ಸಾವಿರ ಕುರುಬ, 10 ಸಾವಿರಕ್ಕೂ ಹೆಚ್ಚು ಇತರ ಮತಗಳಿವೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಸ್ಪರ್ಧಿಸಿದ್ದಾರೆ. ಒಟ್ಟು 8 ಅಭ್ಯರ್ಥಿಗಳಿದ್ದಾರೆ. ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತಗಳಿವೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಲಿಂಗಾಯತ ಮತಗಳೆ ನಿರ್ಣಾಯಕವಾಗಿವೆ. ಲಿಂಗಾಯತ 85 ಸಾವಿರ, ಮುಸ್ಲಿಂ 58 ಸಾವಿರ, ಕುರುಬ 27 ಸಾವಿರ, ಎಸ್ಸಿ, ಎಸ್ಟಿ 52 ಸಾವಿರ, ಇತರ 15 ಸಾವಿರ ಮತಗಳಿವೆ.
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರ ಹಣಾಹಣಿ ನಡೆದಿದೆ. ಒಟ್ಟಾರೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.
ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು,. ಎಸ್ಟಿ ಮತಗಳೇ ನಿರ್ಣಾಯಕ ಮತಗಳಾಗಿವೆ. ಎಸ್ಟಿ 68 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯಿತ 38 ಸಾವಿರ, ಕುರುಬ ಮತಗಳು 34 ಸಾವಿರ, ಮುಸ್ಲಿಂ ಮತಗಳು 20 ಸಾವಿರ, ಇತರ 40 ಸಾವಿರ ಮತಗಳಿವೆ.