ಶಿರ್ತಾಡಿ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಆಶ್ರಯದಲ್ಲಿ ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ವಿಶ್ವ ಶಾಂತಿ ಯಾಗ ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ನೇತೃತ್ವದಲ್ಲಿ ನಡೆಯಿತು.
ಕೇರಳ ಶಿವಗಿರಿ ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಭಾಗವಹಿಸಿ, ಶ್ರೀ ನಾರಾಯಣ ಗುರುಗಳು ಪ್ರತ್ಯಕ್ಷ ದೇವರು. ಹಿಂದುಳಿದ ವರ್ಗದವರಿಗಾಗಿ ಆರಾಧನಾಲಯ, ಶಿಕ್ಷಣ ಕೇಂದ್ರಗಳನ್ನು ನಿರ್ಮಿಸಿ ಮಾದರಿಯಾದವರು ಎಂದು ಅಭಿಪ್ರಾಯ ಪಟ್ಟರು. ಅಧ್ಯಾತ್ಮ ದುಃಖ, ಆದಿಭೌತಿಕ ದುಃಖ, ಆದಿ ದೈವಿಕ ದುಃಖ ತಡೆಯುವುದೇ ಯಾಗದ ಉದ್ದೇಶ. ಧರ್ಮ ಮೆರೆದಾಗ ಮನುಷ್ಯ ಮಾನವೀಯತೆ ಮೆರೆಯುತ್ತಾನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ ರೇಣುಕಾ ಮಠದ ಪೀಠಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಅಗ್ನಿ ಬಾಹ್ಯ ಕಲ್ಮಶಗಳನ್ನು ನಾಶ ಪಡಿಸುವ ಗುಣಧರ್ಮ ಉಳ್ಳದ್ದು. ಶ್ರದ್ದಾ ಭಕ್ತಿಯಿಂದ ಕೂಡಿದ ಯಾಗ ಸನ್ಮಂಗಲ ಸೃಷ್ಟಿಸಲಿದೆ ಎಂದರು.
ಕೇರಳ ಶಿವಗಿರಿ ಮಠದ ಕಿರಿಯ ಸ್ವಾಮೀಜಿ ಗಿರಿಜಾನಂದ ರವರು ಉಪಸ್ಥಿತರಿದ್ದರು. ಸಂಘದ ವ್ಯಾಪ್ತಿಗೊಳಪಟ್ಟ ಗ್ರಾಮಗಳ ಬರ್ಕೆ ಮನೆತನದ ಗುರಿಕಾರರು ವೇದಿಕೆಯಲ್ಲಿದ್ದರು. ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ನ ಧರ್ಮಗುರು ರೆ. ಫಾ. ಹೆರಾಲ್ಡ್ ಮಸ್ಕರೇನ್ಹಸ್, ಪಣಪಿಲ ಅರಮನೆ ವಿಮಲ್ ಕುಮಾರ್, ಮಜಲೋಡಿ ಗುತ್ತು ಪ್ರಮೋದ್ ಅರಿಗ, ಶ್ರೀ ಬ್ರಹ್ಮ ರೆಸಿಡೆನ್ಸಿ ಮಾಲಕ ಸತೀಶ್ ವಿ. ಶೆಟ್ಟಿ, ಮೂಡುಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ.,ಉಪಾಧ್ಯಕ್ಷ ಈಶ್ವರ್ ಕಟೀಲ್, ಕೆಪಿಸಿಸಿ ಸದಸ್ಯ ಚಂದ್ರಹಾಸ್ ಸನಿಲ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಇರುವೈಲ್ ಪಾನಿಲ ಸತೀಶ್ಚಂದ್ರ, ಅಳಿಯೂರು ಉಮಲತ್ತಡೆ ಗರಡಿ ಅಧ್ಯಕ್ಷ ಪ್ರವೀಣ್ ಭಟ್, ಕಾರ್ಯದರ್ಶಿ ಹರೀಶ್ಚಂದ್ರ ಪಡಿವಾಳ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ವೈದಿಕ ಸಮಿತಿ ಮಾಜಿ ಅಧ್ಯಕ್ಷ ಸೋಮನಾಥ್ ಶಾಂತಿ ಕಂದಿರು ನೇತೃತ್ವದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಶಾಂತಿ ಮಾರ್ಗದರ್ಶನ ದಲ್ಲಿ 60 ಮಂದಿ ಶಾಂತಿಯವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಯಾಗ ಸಮಿತಿ ಸಂಚಾಲಕ ವಿಶ್ವನಾಥ್ ಕೋಟ್ಯಾನ್ ಹನ್ನೇರ್, ಅಶ್ವಿನಿ ದಂಪತಿ ಪೂಜಾ ಸಂಕಲ್ಪ ಕೈಗೊಂಡರು. ಸಮುದಾಯದ ಸುಮಾರು ೫೦ ಕ್ಕೂ ಅಧಿಕ ಸಂಘ ಸಂಸ್ಥೆಗಳು ಸಹಕರಿಸಿದರು. ಯಾಗ ಮುಂಚಿತವಾಗಿ ಗುರುಪೂಜೆ, ನಂತರ ಉಮೇಶ್ ಮಿಜಾರ್ ಬಳಗದ ಹಾಸ್ಯ ಮನೋರಂಜನೆ ಜರುಗಿತು.