ಅಲ್‌ ಖೈದಾ ನಂಟಿನ ಶಂಕೆ : ಬಾಂಗ್ಲಾದೇಶ ಪ್ರಜೆಗಳಿಗೆ ಎನ್‌ಐಎ ಶೋಧ

ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳಲ್ಲಿ ಎನ್‌ಐಎ ದಾಳಿ

ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಅಲ್‌ ಖೈದಾ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಭಾರತವನ್ನು ಅಸ್ಥಿರಗೊಳಿಸಲು ಅಲ್​ ಖೈದಾ ಉಗ್ರ ಸಂಘಟನೆಯ ಸಂಚು ಮಾಡಿರುವ ಕುರಿತು ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ. ಜೊತೆಗೆ ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ ಮಾಡುವ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂನ 9 ಕಡೆ ದಾಳಿ ಮಾಡಲಾಗಿದೆ.































 
 

ಕೆಲ ದಿನಗಳ ಹಿಂದೆಯಷ್ಟೇ ಉಡುಪಿ ಸೇರಿದಂತೆ ಕರ್ನಾಟಕದ ಹಲವೆಡೆ ನಕಲಿ ದಾಖಲೆಪತ್ರಗಳ ನೆರವಿನಿಂದ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಕೆಲವು ಪ್ರಜೆಗಳನ್ನು ಬಂಧಿಸಲಾಗಿತ್ತು. ಬಾಂಗ್ಲಾದಿಂದ ಅಕ್ರಮವಾಗಿ ಬಂದು ಇಲ್ಲಿ ವ್ಯವಸ್ಥಿತವಾಗಿ ಆಧಾರ್‌ ಮತ್ತಿತರ ದಾಖಲೆಪತ್ರಗಳನ್ನು ಮಾಡಿಸಿಕೊಂಡು ನೆಲೆಸುತ್ತಿದ್ದರು. ಈ ಪೈಕಿ ಹಲವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಗುಮಾನಿ ಹಿಂದಿನಿಂದಲೂ ಇದೆ.

ಎನ್​ಐಎ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಬ್ಯಾಂಕ್‌ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಧನಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
2023ರ ನವೆಂಬರ್‌ನಲ್ಲಿ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಅಲಿಯಾಸ್​ ಮುನ್ನಾ ಖಾನ್, ಅಜರುಲ್ ಇಸ್ಲಾಂ ಅಲಿಯಾಸ್​ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಅಲಿಯಾಸ್​ ಮೊಮಿನುಲ್ ಅನ್ಸಾರಿ ಮತ್ತು ಐದನೇ ಆರೋಪಿ ಫರೀದ್ ಭಾರತೀಯ ಪ್ರಜೆಯಾನ್ನು ಬಂಧಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ.
ಐವರು ಆರೋಪಿಗಳು ತಮ್ಮ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬುದು ಅವರ ಪೂರ್ವಾಪರದ ಬಗ್ಗೆ ಎನ್‌ಐಎ ತನಿಖೆ ನಡೆಸಿದಾಗ ತಿಳಿದು ಬಂದಿತ್ತು. ಭಾರತದಲ್ಲಿನ ಮುಸ್ಲಿಂ ಯುವಕರನ್ನು ಪ್ರೇರೇಪಿಸುವಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ ಖೈದಾದ ಹಿಂಸಾತ್ಮಕ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಹಣ ಸಂಗ್ರಹಿಸಿ ಅದನ್ನು ಅಲ್ ಖೈದಾಕ್ಕೆ ಕಳುಹಿಸುತ್ತಿದ್ದರು ಎನ್​ಐಎ ಮಾಹಿತಿ ನೀಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top