ಕೊಪ್ಪದ ಮನೆಯೊಂದರಲ್ಲಿ ಮೂರು ಬಂದೂಕು ಪತ್ತೆ : ನಕ್ಸಲರು ನುಸುಳಿರುವ ಶಂಕೆ

ಅರಣ್ಯ ಒತ್ತುವರಿ ತೆರವು ಆದೇಶದ ಬಳಿಕ ನಕ್ಸಲರು ಸಕ್ರಿಯ?

ಕೊಪ್ಪ : ಕಾರ್ಕಳ ಮತ್ತು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಕ್ಸಲ್‌ ಓಡಾಟದ ಶಂಕೆ ವ್ಯಕ್ತವಾದ ಬೆನ್ನಲ್ಲೇ ನಕ್ಸಲ್‌ ನಿಗ್ರಹ ಪಡೆಯವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಕಾಡಂಚಿನಲ್ಲಿರುವ ಮನೆಯೊಂದರಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಈ ಭಾಗದಲ್ಲಿ ನಕ್ಸಲರು ಓಡಾಡಿದ ಅನುಮಾನವನ್ನು ದೃಢಪಡಿಸುತ್ತದೆ ಎನ್ನಲಾಗಿದೆ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಕ್ಸಲರು ಓಡಾಡಿದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಇದಕ್ಕೂ ಎರಡು ದಿನ ಮೊದಲು ಕಾರ್ಕಳದ ಈದು ಪರಿಸರದಲ್ಲೂ ಇದೇ ಮಾದರಿಯ ಸುದ್ದಿ ಹರಿದಾಡಿತ್ತು. ಆದರೆ ವದಂತಿಯನ್ನು ದೃಢಪಡಿಸುವ ಯಾವುದೇ ಸಾಕ್ಷಿ ನಕ್ಸಲ್‌ ನಿಗ್ರಹ ಪಡೆಗೆ ಈದುವಿನಲ್ಲಿ ಸಿಕ್ಕಿರಲಿಲ್ಲ.
ಈಗ ಚಿಕ್ಕಮಗಳೂರಿನಲ್ಲಿ ಬಂದೂಕುಗಳು ಸಿಕ್ಕಿರುವುದು ದಶಕದ ಬಳಿಕ ನಕ್ಸಲ್ ಚಟುವಟಿಕೆ ಆರಂಭವಾಗಿರುವ ಶಂಕೆಗೆ ಪುಷ್ಟಿ ನೀಡಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್​ ನಿಗ್ರಹ ಪಡೆಯವರು ಮತ್ತು ಪೊಲೀಸರು ತಪಾಸಣೆಗೆ ಇಳಿದಿದ್ದಾರೆ. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ 3 ಬಂದೂಕು ಪತ್ತೆಯಾಗಿವೆ. ಈ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ನೇತೃತ್ವದ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿದೆ. ಬಂದೂಕು ಸಿಕ್ಕಿರುವ ಸಂಬಂಧ ಜಯಪುರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಟಿ ಎಡಿಜಿಪಿ ಪ್ರಣಬ್ ಮೊಹಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯ ಭೂಮಿ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ತೀವ್ರ ಕೂಂಬಿಂಗ್ ಕಾರ್ಯಚರಣೆ ನಡೆಯುತ್ತಿದೆ.





































 
 

ಈದು ಗ್ರಾಮದಲ್ಲಿ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿ ನಕ್ಸಲ್​ ನಿಗ್ರಹ ಪಡೆ ಕಾರ್ಯಾಚರಣೆ ಮಾಡಿತ್ತು. ಕೆಲವು ದಿನಗಳಿಂದ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂಬ ವದಂತಿಗಳು ಈದುವಿನಲ್ಲಿ ದಟ್ಟವಾಗಿ ಹಬ್ಬಿದ್ದವು. ಈ ಬಗ್ಗೆ ಎಎನ್ಎಫ್ ಸಿಬ್ಬಂದಿ ಸ್ಥಳೀಯರನ್ನು ವಿಚಾಣೆ ಮಾಡಿದ್ದಾರೆ. ಆದರೆ ಸ್ಥಳೀಯರಿಂದ ಯಾವುದೇ ಮಾಹಿತಿ ದೊರೆತ್ತಿಲ್ಲ ಎಂದು ಎಎನ್ಎಫ್ ಮೂಲಗಳು ತಿಳಿಸಿವೆ. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಗ್ರಾಮದ ಸುತ್ತಮುತ್ತ ನಕ್ಸಲರು ಓಡಾಡಿದ ಮಾಹಿತಿ ಸಿಕ್ಕಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲಾಗಿತ್ತು.

ನಕ್ಸಲರು ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳಲ್ಲಿ ನುಸುಳಿದ್ದಿರಬಹುದು ಎಂದು ಶಂಕೆಯಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಸದ್ಯ ಇದುವರೆಗೆ ನಕ್ಸಲರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಎಎನ್​​ಎಫ್​​ ಅಧಿಕಾರಿಗಳು ಧೈರ್ಯ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top