ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ

400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಬಹಭಾಷಾ ಕಲಾವಿದ

ಚೆನ್ನೈ : ನೂರಾರು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಅವರು ‘ಡೆಲ್ಲಿ ಗಣೇಶ್ ಅವರು, ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೆ ಬಾಲಚಂಧರ್ ಅವರಂಥ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್ ಹಲವು ಸ್ಟಾರ್ ನಟ-ನಟಿಯರೊಟ್ಟಿಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್​ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಡೆಲ್ಲಿ ಗಣೇಶ್ ನಟನೆ ಮಾಡಿದ್ದಾರೆ.
1976ರಿಂದಲೂ ನಟಿಸುತ್ತಿರುವ ಡೆಲ್ಲಿ ಗಣೇಶ್ ತಮಿಳು, ಮಲಯಾಳಂ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾದಲ್ಲಿಯೂ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ, ಎರಡು ವೆಬ್ ಸರಣಿಗಳಲ್ಲಿಯೂ ಡೆಲ್ಲಿ ಗಣೇಶ್ ನಟಿಸಿದ್ದಾರೆ. ವಿಶೇಷವೆಂದರೆ ಶಂಕರ್ ನಾಗ್ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿ ಸಹ ಡೆಲ್ಲಿ ಗಣೇಶ್ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು. ಡೆಲ್ಲಿ ಗಣೇಶ್ ನಿಧನದ ಬಗ್ಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top