ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಸಹಯೋಗದೊಂದಿಗೆ ಎಂಬಿಎ ಕಲಿಕೆಯ ಮೂಲಕ ತಮ್ಮ ವೃತ್ತಿಪರ ಬದುಕನ್ನು ಎತ್ತರಿಸಿಕೊಳ್ಳುವುದು ಹೇಗೆ ಎನ್ನುವ ವಿಷಯದ ಬಗ್ಗೆ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಮಾರ್ಗದರ್ಶನ ಶಿಬಿರವನ್ನು ಏರ್ಪಡಿಸಲಾಯಿತು.
ಒಟ್ಟು ನಾಲ್ಕು ಅವಧಿಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಎಂಬಿಎ ಕಲಿಕೆಯಿಂದ ಆಗುವ ಪ್ರಯೋಜನಗಳು, ಸಿಗಬಹುದಾದ ವಿವಿಧ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಲಾಯಿತು. ಮೊದಲ ಅವಧಿಯಲ್ಲಿ ಎಂಬಿಎ ಯಾಕೆ ಎಂಬ ವಿಷಯದ ಕುರಿತು ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ತಿಳಿಸಿದರು. ಎರಡನೇ ಅವಧಿಯಲ್ಲಿ ಪ್ರೊ.ಆಶ್ಲೆ ಡಿಸೋಜ ಎಂಬಿಎ ವಿಶೇಷತೆಗಳು ಎನ್ನುವ ವಿಷಯದಲ್ಲಿ ಅದರ ವಿವಿಧ ಮಜಲುಗಳ ಬಗ್ಗೆ ಅವಲೋಕನ ಮಾಡಿದರು. ಮೂರನೇ ಅವಧಿಯಲ್ಲಿ ಎಂಬಿಎ ನಂತರದ ಉದ್ಯೋಗಾವಕಾಶಗಳು ಎನ್ನುವ ಬಗ್ಗೆ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ತಿಳಿಸಿದರು. ಕೊನೆಯ ಅವಧಿಯಲ್ಲಿ ಪ್ರೊ.ರೇಶ್ಮಾ ಪೈ ಹಾಗೂ ಪ್ರೊ.ಜೀವಿತಾ.ಬಿ.ಕೆ. ಕಾಲೇಜಿನ ಎಂಬಿಎ ವಿಭಾಗದ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಇಡೀ ದಿನ ನಡೆದ ಈ ಕಾರ್ಯಾಗಾರದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.