ವೋಟಿನ ಆಸೆಗೆ ನಮ್ಮವರೇ ಕೊಟ್ಟ ವರ ಎಂದು ಆರೋಪ
ಚಿಕ್ಕಮಗಳೂರು: ರೈತರ, ಮಠ, ದೇವಸ್ಥಾನಗಳ ಜಮೀನು ಕಬಳಿಸುತ್ತಿರುವ ವಕ್ಫ್ ಬೋರ್ಡನ್ನು ಬಿಜೆಪಿ ನಾಯಕ ಸಿ.ಟಿ.ರವಿ ಭಸ್ಮಾಸರನಿಗೆ ಹೋಲಿಸಿದ್ದಾರೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ಹೇಳಿದ್ದಾರೆ.
ಚಿಕ್ಕಮಗಳೂರಿನ ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಮಾತನಾಡಿದ ಅವರು, ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನು ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನು ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನು ನಾಶ ಮಾಡುವುದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಹರಿಹಾಯ್ದರು.
ವಕ್ಫ್ ಬೋರ್ಡಿಗೆ ಪರಮಾಧಿಕಾರವಿದೆ, ದೇಶ-ಜಗತ್ತಿನ ಯಾವ ಆಸ್ತಿಯನ್ನಾದರೂ ನಮ್ಮದು ಅನ್ನಬಹುದು. ಒಮ್ಮೆ ಘೋಷಣೆ ಮಾಡಿಕೊಂಡರೆ ಅಲ್ಲಾಗೆ ಸೇರಿದ್ದು ಅಂತಾರೆ. ಬಲಿ ಚಕ್ರವರ್ತಿ ವಿಷ್ಣುವಿನ ಅವತಾರದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಮತ್ತೆ ದಾನ ಕೊಡಬೇಕು ಅಂದರೆ ವಿಷ್ಣುವಿನ ಅವತಾರದ ವಾಮನನೇ ಬರಬೇಕು. ಇಡೀ ಭೂಮಂಡಲವೇ ಮಹಾವಿಷ್ಣುಗೆ ಸೇರಿದ್ದು. ಮಹಾವಿಷ್ಣು ಎಲ್ಲಿವರೆಗೆ ಇನ್ನೊಬ್ಬರಿಗೆ ಭೂಮಿ ಕೊಡಲ್ವೋ ಅಲ್ಲಿವರೆಗೂ ಅದು ಸನಾತನ ಧರ್ಮೀಯರದ್ದು. ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿ ಮೇಲೆ ಬದುಕುವ ಹಕ್ಕಿದೆ ಅಷ್ಟೆ. ದಶಾವತಾರ, ದೇವನೊಬ್ಬ ನಾಮ ಹಲವು, ಬಹುದೇವತಾರಾಧನೆ ಬಗ್ಗೆ ನಂಬಿಕೆ ಇಟ್ಟಿದ್ದಾರೋ ಅವರಿಗೆ ಮಾತ್ರ ವಾರಸುದಾರಿಕೆ ಇದೆ ಎಂದು ಹೇಳಿದರು.