ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್ ಅಗತ್ಯ
ಶಬರಿಮಲೆ : ಮಂಡಲ ಮತ್ತು ಮಕರ ವಿಳಕ್ಕು ಸಂದರ್ಭದಲ್ಲಿ ಶಬರಿಮಲೆ ಯಾತೆಗೈಯ್ಯುವ ಎಲ್ಲ ಭಕ್ತರು ಆಧಾರ್ ಕಾರ್ಡ್ ಒಯ್ಯಬೇಕೆಂದು ದೇವಸ್ವಂ ಬೋರ್ಡ್ ಹೇಳಿದೆ. ಶಬರಿಮಲೆ ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. ಹೀಗಾಗಿ ಎಲ್ಲ ಯಾತ್ರಿಕರು ಯಾವುದಾದರೊಂದು ರೂಪದ ಆಧಾರ್ ಕಾರ್ಡ್ ಹೊಂದಿರಬೇಕು ಎಂದು ದೇವಸ್ವಂ ಬೋರ್ಡ್ ಹೇಳಿದೆ.
ಅನಿವಾಸಿ ಭಾರತೀಯ ಭಕ್ತರು ಆಧಾರ್ ಬದಲಾಗಿ ಪಾಸ್‌ಪೋರ್ಟನ್ನು ದಾಖಲೆಯಾಗಿ ತೋರಿಸಬಹುದು. ಈ ಸಲ ಶಬರಿಮಲೆ ಯಾತ್ರೆಗಾಗಿ ಕೇರಳ ಸರಕಾರ ಇಂತಹ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ.
ನಿತ್ಯ 80,000 ಭಕ್ತರಿಗೆ ಮಾತ್ರ ಅಯ್ಯಪ್ಪನ ದರ್ಶನ ಸಿಗಲಿದೆ. ಎಲ್ಲರೂ ದರ್ಶನ ಕಾದಿರಿಸಿಕೊಂಡು ಹೋಗಬೇಕು. ಆನ್‌ಲೈನ್ ಬುಕ್ಕಿಂಗ್ ಮಾಡದವರಿಗೆ ಶಬರಿಮಲೆಯಲ್ಲಿ ದರ್ಶನ ಕಾದಿರಿಸಲು ಮೂರು ಕೌಂಟರ್‌ಗಳನ್ನು ತೆರೆಯಲಾಗುವುದು. ಇಲ್ಲಿ ಆಧಾರ್ ದಾಖಲೆಯಾಗಿ ತೋರಿಸಿ ದರ್ಶನ ಕಾದಿರಿಸಬೇಕು.
ಅಯ್ಯಪ್ಪನ ದರ್ಶನಕ್ಕೆ ಮಿತಿ ಹೇರಿದ್ದರೂ ಇರುಮುಡಿ ಹೊತ್ತುಕೊಂಡು ಬರುವ ಎಲ್ಲರಿಗೂ ದರ್ಶನದ ವ್ಯವಸ್ಥೆ ಮಾಡಲಾಗುವುದು. ಯಾರೂ ದರ್ಶನ ಸಿಗದೆ ವಾಪಸು ಹೋಗುವ ಪ್ರಮೇಯ ಬರುವುದಿಲ್ಲ ಎಂದು ದೇವಸ್ವಂ ಬೋರ್ಡ್ ಸ್ಪಷ್ಟಪಡಿಸಿದೆ.
ವಂಡಿಪೆರಿಯಾರ್, ಎರಮೇಲಿ ಮತ್ತು ಪಂಪಾದಲ್ಲಿ ಸ್ಪಾಟ್ ಬುಕ್ಕಿಂಗ್ ಕೌಂಟರ್‌ಗಳಿರುತ್ತವೆ. ದಿನಕ್ಕೆ 10,000 ಭಕ್ತರಿಗೆ ಇಲ್ಲಿ ಸ್ಪಾಟ್ ದರ್ಶನ ಬುಕ್ಕಿಂಗ್ ಮಾಡಿಕೊಡಲಾಗುವುದು. ಸನ್ನಿಧಾನದಲ್ಲಿ ಉಂಟಾಗುವ ನೂಕುನುಗ್ಗಲು ಮತ್ತು ಗೊಂದಲವನ್ನು ನಿವಾರಿಸಲು ಈ ಸಲ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ದರ್ಶನ ಕಾದಿರಿಸುವುದರಿಂದ ಎಷ್ಟು ಮಂದಿ ಎರಡು ತಿಂಗಳಲ್ಲಿ ಸನ್ನಿಧಾನಕ್ಕೆ ಬಂದಿದ್ದಾರೆ ಎಂಬ ನಿಖರ ಲೆಕ್ಕ ಸಿಗಲಿದೆ ಎಂದು ದೇವಸ್ವಂ ಬೋರ್ಡ್ ಹೇಳಿದೆ.