ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಿದವರು ಕೇಶವ ಅಮೈ : ಜುಬಿನ್ ಮೊಹಾಪಾತ್ರ
ಮಾನವೀಯ ಗುಣಗಳನ್ನು ಗುಣಗಳನ್ನು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ : ಜಿ.ಎಲ್. ಬಲರಾಮ ಆಚಾರ್ಯ
ಪುತ್ತೂರು: ಎಸ್‌ಆರ್‌ಕೆ ಲ್ಯಾಡರ್ಸ್‌ನ ದಶಮಾನೋತ್ಸವದ ಅಂಗವಾಗಿ ಪುತ್ತೂರು ರೋಟರಿ ಕ್ಲಬ್ ಹಾಗೂ ಎಸ್‌ಆರ್‌ಕೆ ಲ್ಯಾಡರ್ಸ್ ಸಹಯೋಗದಲ್ಲಿ ದೀಪಾವಳಿ ಸಂಭ್ರಮ, ಎಸ್‌ಆರ್‌ಕೆ ರಜತ ಸಂಭ್ರಮದ ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಕೊಯಿಲ ಕಲಾಯಿಗುತ್ತುನಲ್ಲಿ ಶುಕ್ರವಾರ ನಡೆಯಿತು.
ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಇಡೀ ದೇಶದಲ್ಲಿ ಅತಿ ಆಧುನಿಕವಾಗಿರುವ ದ.ಕ.ಜಿಲ್ಲೆ ಸಂಪ್ರದಾಯವನ್ನೂ ಉಳಿಸಕೊಂಡಿಸಿದೆ. ಇಲ್ಲಿ ಶ್ರೀಮಂತ ಸಂಪ್ರದಾಯಗಳಿವೆ. ಮೂಲ ಸಂಪ್ರದಾಯ ಬಿಡದೆ ಆಧುನಿಕತೆಯೊಂದಿಗೆ ಜೀವಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಎಲ್ಲರನ್ನು ಸೇರಿಸಿಕೊಂಡು ಆಚರಣೆ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಕೇಶವ ಅಮೈ ಅವರು ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಿರುವುದು ಶ್ಲಾಘನೀಯ ಎಂದರು.
ಸವಾಲುಗಳನ್ನು ಎದುರಿಸುವುದು ಕಷ್ಟ. ಆದರೆ ಕೇಶವ ಅಮೈಯವರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ್ದಾರೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪುತ್ತೂರಿನ ಸ್ವರ್ಣೋದ್ಯಮಿ ಜಿ.ಬಲರಾಮ್ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ವ್ಯವಹಾರವನ್ನು ಲಾಭಾಂಶಕ್ಕೆ ತರುವುದು ಭಾರಿ ಕಷ್ಟವಾಗಿತ್ತು. 25 ವರ್ಷಗಳ ವ್ಯವಹಾರದಲ್ಲಿ ಯಶಸ್ಸು ಗಳಿಸಿರುವುದು ಅಭಿನಂದನೀಯ. ಬರೀ ಲಾಭದ ಬೆನ್ನು ಹತ್ತಿದವ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿಲ್ಲ. ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಈ ಸಮಾರಂಭವನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದ ಕೇಶವ ಅಮೈ ಅಭಿನಂದನಾರ್ಹರು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರೋಟರಿ ಕ್ಲಬ್ ಕಾರ್ಯದರ್ಶಿ ರಚನಾ ಜಯರಾಮ್, ಸುಳ್ಯ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಶುಭ ಹಾರೈಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆ ಸಂಪಾದಕ ಮೌನೇಶ್ ವಿಶ್ವಕರ್ಮ ಸಂಚಿಕೆ ಕುರಿತು ಮಾತನಾಡಿದರು. ಚಂದ್ರಶೇಖರ ಬರಿಮಾರು ಅವರನ್ನು ಸನ್ಮಾನಿಸಲಾಯಿತು. ಎಸ್‌ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ದಂಪತಿ ಹಾಗೂ ಪುತ್ರರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕೇಶವ ಅಮೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಮಾ ಕೋಟೆ, ರಾಶಿ ಬರೆಪ್ಪಾಡಿ ಮತ್ತು ಬಳಗದವರಿಂದ ಸಂಗೀತ ರಸಸಂಜೆ ನಡೆಯಿತು.