ಮಳೆಯಿಂದಾಗಿ ಬೆಳೆ ನಾಶವಾಗಿ ಇಳುವರಿ ಕುಂಠಿತ
ಬೆಂಗಳೂರು : ಈರುಳ್ಳಿ ಬೆಲೆ ಮತ್ತೆ ಏರುಗತಿಯಲ್ಲಿದ್ದು, ಶತಕದತ್ತ ಮುನ್ನುಗ್ಗುತ್ತಿದೆ. ಸದ್ಯ ರಾಜ್ಯದಲ್ಲಿ ಮಳೆ ತಗ್ಗಿದ್ದರೂ ಕಳೆದ ತಿಂಗಳು ಬಂದ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರುಪಾಲಾಗಿರುವುದರಿಂದ ದಿಢೀರ್ ಎಂದು ಬೆಲೆ ಏರಲಾರಂಭಿಸಿದೆ. ಕೆಜಿಗೆ 50-60 ರೂ. ಇದ್ದ ಈರುಳ್ಳಿಯ ಬೆಲೆ ಕಳೆದೊಂದು ವಾರದಿಂದ 70 ರಿಂದ 80 ರೂಪಾಯಿವರೆಗೆ ಏರಿಕೆಯಾಗಿದೆ. ಚಿಲ್ಲರೆ ಬೆಲೆ ಕೆಜಿಗೆ 90 ರೂ. ಇದೆ.
ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಇಲ್ಲದಿದ್ದರೂ ಬೆಲೆ 70ರ ಗಡಿ ದಾಟಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯ ಪರಿಣಾಮ ನಿರೀಕ್ಷೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಬಂದ ಅಲ್ಪಸ್ವಲ್ಪ ಈರುಳ್ಳಿಯ ಗುಣಮಟ್ಟವೂ ಚೆನ್ನಾಗಿಲ್ಲ. ಹೀಗಾಗಿ ಸದ್ಯ ಈರುಳ್ಳಿಯನ್ನು ಮಹಾರಾಷ್ಟದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಮಹಾರಾಷ್ಟ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಒಂದೆಡೆ ಪೂರೈಕೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಬೇಡಿಕೆಯೂ ಗಣನೀವಾಗಿ ಹೆಚ್ಚಿದೆ. ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಕೆಜಿಗೆ 70ರಿಂದ 80 ರೂ. ಇದ್ದರೆ, ಸಣ್ಣಪುಟ್ಟ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ. ಆಗಿದೆ. ಮುಂದಿನ ದಿನಗಳಲ್ಲಿ 100 ರ ಗಡಿದಾಟುವ ಸಾಧ್ಯತೆಗಳಿವೆ.