ಗುಜರಾತಿನಲ್ಲೊಂದು ವಿಸ್ಮಯದ ಘಟನೆ
ಸೂರತ್ : ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳು ಮೃತಪಟ್ಟಾಗ ಮನೆಯವರು ಮನುಷ್ಯರಿಗೆ ಮಾಡಿದಂತೆ ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡುವುದುಂಟು. ಕೆಲವರು ಅಂತ್ಯಕ್ರಿಯೆಯ ಬಳಿಕ ಉತ್ತರಕ್ರಿಯೆಯನ್ನೂ ಮಾಡುತ್ತಾರೆ. ಇದು ಆ ಮನೆಯವರು ಸಾಕುಪ್ರಾಣಿಯ ಮೇಲಿಟ್ಟ ಪ್ರೀತಿಯನ್ನು ತೋರಿಸುತ್ತದೆ. ಆದರೆ ಯಾರಾದರೂ ತಮ್ಮ ಮೆಚ್ಚಿನ ಕಾರಿಗೆ ಅಂತ್ಯಕ್ರಿಯೆ ಮಾಡುವುದನ್ನು ಕೇಳಿದ್ದೀರಾ? ಸಾಮಾನ್ಯವಾಗಿ ವಾಹನಗಳು ಹಳೆಯದಾದರೆ ಮಾರಿ ಹೊಸದು ತರುತ್ತೇವೆ. ಕೆಲವರು ಹಳೆಯ ವಾಹನವನ್ನು ಅಭಿಮಾನದಿಂದ ಮನೆಯಲ್ಲೇ ಇಟ್ಟುಕೊಳ್ಳುವುದೂ ಇದೆ. ಆದರೆ ಗುಜರಾತಿನ ಸೂರತ್‌ನಲ್ಲಿರುವ ಒಂದು ಕುಟಂಬ ತಮಗೆ ಅದೃಷ್ಟ ತಂದುಕೊಟ್ಟ ಪ್ರೀತಿಯ ಕಾರಿಗೆ ಅಂತ್ಯಕ್ರಿಯೆ ನೆರವೇರಿಸಿ ಅಚ್ಚರಿಯುಂಟು ಮಾಡಿದೆ.
ಸೂರತ್‌ನಲ್ಲಿ ಗುತ್ತಿಗೆದಾರರಾಗಿರುವ ಸಂಜಯ್ ಪಲ್ಲೋರ ಕುಟುಂಬ ಈ ರೀತಿ ಕಾರನ್ನು ಹೂತು ಅಂತ್ಯಕ್ರಿಯೆ ನೆರವೇರಿಸಿದವರು. 12 ವರ್ಷದ ಹಿಂದೆ ಖರೀದಿಸಿದ ಮಾರುತಿ ವ್ಯಾಗನರ್ ಕಾರು ಈ ಕುಟುಂಬಕ್ಕೆ ಅದೃಷ್ಟ ತಂದುಕೊಟ್ಟಿತ್ತು. ಆದರೆ ಕಾರು ಹಳೆಯದಾದ ಕಾರಣ ಬದಲಾಯಿಸಬೇಕಿತ್ತು. ಹಳೆ ಕಾರನ್ನು ಏನು ಮಾಡುವುದು ಎಂಬ ಪ್ರಶ್ನೆ ಎದುರಾದಾಗ ಕಾರಿಗೆ ಅಂತ್ಯಕ್ರಿಯೆ ನೆರವೇರಿಸುವ ಆಲೋಚನೆ ಕುಟುಂಬಕ್ಕೆ ಬಂತು.
ಸೂರತ್‌ನಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ರಾಜ್‌ಕೋಟ್‌ನಲ್ಲಿ ಸಂಜಯ್ ಪಲ್ಲೋರ ಮನೆ ಮತ್ತು ಕೃಷಿ ಜಮೀನು ಹೊಂದಿದ್ದು, ಅಲ್ಲಿಯೇ ಕಾರನ್ನು ಸಮಾಧಿ ಮಾಡಲಾಗಿದೆ. ಜೆಸಿಬಿ ಸಹಾಯದಿಂದ ದೊಡ್ಡ ಗುಂಡಿ ತೆಗೆದು, ಅದಕ್ಕೆ ಇಳಿಯಲು ಇಳಿಜಾರು ದಾರಿ ಮಾಡಲಾಗಿತ್ತು. ಕಾರನ್ನು ಹೂವಿನಿಂದ ಅಲಂಕರಿಸಿ ಮರವಣಿಗೆಯಲ್ಲಿ ತಂದು ನಿಧಾನವಾಗಿ ಗುಂಡಿಗೆ ಇಳಿಸಲಾಯಿತು. ನಂತರ ಹಿಂದು ಧರ್ಮದಂತೆ ಕುಟುಂಬದ ಎಲ್ಲ ಸದಸ್ಯರು ಮಣ್ಣು ಸುರಿದು ಕಾರಿಗೆ ವಿಧಿವತ್ತಾಗಿ ವಿದಾಯ ಕೋರಿದರು. ಗುಂಡಿ ಮುಚ್ಚಿದ ಮೇಲೆ ಅದರ ಮೇಲೆ ಗುಲಾಬಿ ಹೂಗಲ ಪಕಳೆಗಳನ್ನು ಹರಡಲಾಯಿತು. ಬಳಿಕ ಪುರೋಹಿತರು ಶಾಸ್ತ್ರೋಕ್ತವಾಗಿ ಪೂಜೆಯನ್ನೂ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಊರಿನ 1500ರಷ್ಟು ಮಂದಿ ಪಾಲ್ಗೊಂಡಿದ್ದರು. ಒಟ್ಟಾರೆ ಸುಮಾರು 1 ಲ.ರೂ. ಅಂತ್ಯಕ್ರಿಯೆಗೆ ಖರ್ಚಾಗಿದೆ.
ಕಾರನ್ನು ಯಾರಿಗಾದರೂ ಮಾರಿದ್ದರೆ ಅಥವಾ ಗುಜರಿಗೆ ಕೊಟ್ಟಿದ್ದರೆ ಅದು ನಮ್ಮಿಂದ ಶಾಶ್ವತವಾಗಿ ದೂರವಾಗುತ್ತಿತ್ತು. ಸಮಾಧಿ ಮಾಡಿದ ಕಾರಣ ಅದೃಷ್ಟ ತಂದುಕೊಟ್ಟ ಕಾರಿಗೆ ಸೂಕ್ತ ಗೌರವ ಸಲ್ಲಿಸಿದ ತೃಪ್ತಿ ನಮಗಿದೆ ಎಂದು ಸಂಜಯ್ ಪಲ್ಲೋತ್ರ ಹೇಳಿಕೊಂಡಿದ್ದಾರೆ.