ಉಪಚುನಾವಣೆ : ಮೂರೂ ಪಕ್ಷಗಳಿಗೆ ಗೆಲ್ಲಲೇ ಬೇಕಾದ ಸಮರ ಕಣ

ರಾಜ್ಯದ ರಾಜಕೀಯದ ಭವಿಷ್ಯ ಈ ಉಪಚುನಾವಣೆಯಲ್ಲಿದೆ

ಬೆಂಗಳೂರು: ನವೆಂಬರ್‌ 13ರಂದು ನಡೆಯಲಿರುವುದು ರಾಜ್ಯದ ಬರೀ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ. ಆದರೆ ಈ ಮೂರು ಕ್ಷೇತ್ರಗಳೇ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನಲಾಗುತ್ತಿದೆ. ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲ್ಲಲು ಮೂರೂ ಪಕ್ಷಗಳು ಶಕ್ತಿಮೀರಿ ಪ್ರಯತ್ನಸುತ್ತಿವೆ, ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಡುತ್ತಿವೆ. ಮೂರೂ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಎನ್ನುವುದು ವಾಸ್ತವ. ಮೂರು ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾರಣ ಉಪಚುನಾವಣೆ ಬಂದಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಬಿಜೆಪಿ, ಚನ್ನಪಟ್ಟಣದಲ್ಲಿ ಜೆಡಿಎಸ್‌ ಮತ್ತು ಸಂಡೂರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

ಸಿದ್ದರಾಮಯ್ಯನವರ ಭವಿಸ್ಯ ನಿರ್ಧರಿಸುವ ಚುನಾವಣೆ































 
 

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ತನಗೆ ಮೆತ್ತಿಕೊಂಡಿರುವ ಮುಡಾ ಸೈಟ್‌ ಕಬಳಿಕೆ ಕಳಂಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಗಳಿಂದ ತನ್ನ ವರ್ಚಸ್ಸಿಗೆ ಹಾನಿಯಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಬೇಕಾದರೆ ಅವರು ಈ ಮೂರು ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ಒಂದು ವೇಳೆ ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಸೋಲಿನ ಮೊದಲ ಗುರಿಯಾಗುವುದೇ ಸಿದ್ದರಾಮಯ್ಯ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಕಾಯುತ್ತಿರುವವರಿಗೆ ಚುನಾವಣೆ ಸೋಲು ಬಲವಾದ ಕಾರಣವಾಗಿ ಸಿಗುತ್ತದೆ. ಈ ವಿಚಾರ ಅರಿವಿದ್ದೇ ಸಿದ್ದರಾಮಯ್ಯ ಉಪಚುನಾವಣೆಯನ್ನು ಅಳಿವು ಉಳಿವಿನ ಸವಾಲಾಗಿ ಪರಿಗಣಿಸಿದ್ದಾರೆ.

ವಕ್ಫ್‌ ವಿವಾದ, ಬೆಲೆ ಏರಿಕೆ, ದಿನಕ್ಕೊಂದರಂತೆ ಕೇಳಿಬರುತ್ತಿರುವ ಹಗರಣಗಳ ಆರೋಪ ಇತ್ಯಾದಿಗಳಿಂದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಬಹಳ ಹಾನಿಯಾಗುತ್ತಿದೆ ಎಂಬುದನ್ನು ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಾರೆ. ಅದರಲ್ಲೂ ರೈತರ ಜಮೀನಿನ ಪಹಣಿಯಲ್ಲಿ ದಿಢೀರ್‌ ಎಂದು ವಕ್ಫ್‌ ಹೆಸರು ಸೇರ್ಪಡೆಯಾಗಿರುವುದು ಪಕ್ಷಕ್ಕೆ ದೊಡ್ಡಮಟ್ಟದ ಹೊಡೆತ ನೀಡುತ್ತಿದೆ. ಸದ್ಯಕ್ಕೆ ಕಾಂಗ್ರೆಸ್‌ ಬಳಿ ಚುನಾವಣೆಯಲ್ಲಿ ಹೇಳಿಕೊಳ್ಳಲು ಇರುವುದು ಪಂಚ ಗ್ಯಾರಂಟಿಗಳು ಮಾತ್ರ. ಹೀಗಿರುವಾಗ ಏನೇ ವಿವಾದ, ಹಗರಣಗಳಿದ್ದರೂ ಪಕ್ಷದ ಜನಪ್ರಿಯತೆ ಕುಸಿದಿಲ್ಲ ಎಂದು ಸಾಬೀತುಪಡಿಸಬೇಕಾದರೆ ಕಾಂಗ್ರೆಸ್‌ ಮೂರೂ ಕ್ಷೇತ್ರಗಳನ್ನು ಗೆದ್ದು ತೋರಿಸಬೇಕಾಗುತ್ತದೆ.

ಡಿಕೆ ಬ್ರದರ್ಸ್‌ ಪ್ರತಿಷ್ಠೆಗೆ ನಿಖಿಲ್‌ ಸವಾಲು

2023ರಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈಗ ಉಪಚುನಾವಣೆಗಾಗುವಾಗ ಈ ಎರಡು ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ಹೀಗಾಗಿ ಚುನಾವಣಾ ಚಿತ್ರಣವೂ ಬದಲಾಗಿದೆ. ಮುಖ್ಯವಾಗಿ ಹಳೆ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ಎಚ್‌.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ತೆರವಾಗಿರುವ ಕ್ಷೇತ್ರಕ್ಕೆ ಅವರ ಪುತ್ರ ನಿಖಿಲ್‌ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ದೇವೇಗೌಡರ ಕುಟುಂಬ ಹಾಗೂ ಡಿಕೆಶಿ ಸಹೋದರರ ನಡುವೆ ಹೈವೋಲ್ಟೇಜ್ ಕದನ ಏರ್ಪಟ್ಟಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹಾಗೂ ರಾಜ್ಯ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ಕಡೆಯಾದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕಾಂಗ್ರೆಸ್‌ನಿಂದ ಈ ಉಪಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಇದು ನಿಖಿಲ್‌ ಕುಮಾರಸ್ವಾಮಿಯ ರಾಜಕೀಯ ಭವಿಷ್ಯದ ಪ್ರಶ್ನೆಯೂ ಹೌದು. ಈ ಚುನಾವಣೆಯಲ್ಲಿ ಸೋತರೆ ಜೆಡಿಎಸ್‌ ಒಂದು ಸ್ಥಾನವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಸತತ ಸೋಲುತ್ತಿರುವ ನಿಖಿಲ್‌ ರಾಜಕೀಯ ಭವಿಷ್ಯವೂ ಡೋಲಾಯಮಾನವಾಗಲಿದೆ. ಇನ್ನೊಂದೆಡೆ ಡಿಕೆಶಿ ಸಹೋದರರಿಗೆ ಇನ್ನೂ ತಮ್ಮ ಬಲ ಇದೆ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆಯಿದೆ. ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಸೋತ ಬಳಿಕ ಡಿಕೆ ಸಹೋದರರು ತುಸು ಬಲಗುಂದಿರುವಂತೆ ಕಾಣಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಗೆಲ್ಲುವ ಮೂಲಕ ತನಗಿನ್ನೂ ಚುನಾವಣೆ ಗೆಲ್ಲುವ ತಾಕತ್ತು ಇದೆ ಎಂಬುದನ್ನು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ತೋರಿಸಿಕೊಡಬೇಕಾಗಿದೆ. ಲೋಕಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಸಿ.ಪಿ.ಯೋಗೀಶ್ವರ್‌ ಅವರನ್ನು ಬಿಜೆಪಿಯಿಂದ ಕರೆತಂದು ಡಿಕೆಶಿ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿದ್ದಾರೆ. ಈ ಜೂಜು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಕುತೂಹಲ ಇಡೀ ರಾಜ್ಯದಲ್ಲಿ ಇದೆ. ಈ ಭಾಗದ ಪ್ರಮುಖ ಸಮುದಾಯವಾದ ಒಕ್ಕಲಿಗ ನಾಯಕತ್ವದ ಪಟ್ಟ ಪಡೆಯುವ ಸಲುವಾಗಿ ಚನ್ನಪಟ್ಟಣ ಗೆಲ್ಲಲು ಗೌಡರ ಕುಟುಂಬ ಹಾಗೂ ಡಿಕೆಶಿ ಬ್ರದರ್ಸ್ ತೀವ್ರ ಜಿದ್ದಾಜಿದ್ದಿಗೆ ಇಳಿದಿದ್ದಾರೆ.

ಮೊಮ್ಮಗ ನಿಖಿಲ್ ಗೆಲ್ಲಲು 92 ವರ್ಷದ ದೇವೇಗೌಡರೇ ಪ್ರಚಾರಕ್ಕಿಳಿದಿದ್ದು, ಅವರಿಗೆ ಬಿಜೆಪಿ ಪ್ರಬಲ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಾಥ್ ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸೋತ ನಂತರ ನಿಖಿಲ್ ಅವರ ಮೂರನೇ ಚುನಾವಣಾ ಹೋರಾಟ ಇದಾಗಿದೆ.

ಶಿಗ್ಗಾಂವಿ ಉಳಿಸಿಕೊಳ್ಳದಿದ್ದರೆ ಬಿಜೆಪಿಗೆ ಹಿನ್ನಡೆ

ಉತ್ತರ ಕರ್ನಾಟಕದ ಶಿಗ್ಗಾಂವಿಯಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರ ಗೆಲುವಿಗಾಗಿ ಮಾತ್ರವಲ್ಲದೆ ತಮ್ಮ ತವರು ನೆಲದಲ್ಲಿ ಹಿಡಿತ ಉಳಿಸಿಕೊಳ್ಳಲು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಪ್ರಚಾರ ಮಾಡುತ್ತಿದ್ದಾರೆ. ಭರತ್ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕ್ಷೇತ್ರವಾಗಿದ್ದರೂ ಮುಸ್ಲಿಂ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಉತ್ತರ ಕರ್ನಾಟಕದಲ್ಲಿ ತೀವ್ರವಾಗಿರುವ ವಕ್ಫ್‌ ಗಲಾಟೆ ಮತ್ತು ಕಾಂಗ್ರೆಸ್‌ನೊಳಗಿನ ಕಚ್ಚಾಟ ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳದಿದ್ದರೆ ಬಸವರಾಜ ಬೊಮ್ಮಾಯಿ ಮಾತ್ರವಲ್ಲ ಬಿಜೆಪಿ ಕೂಡ ತೀವ್ರ ಅವಮಾನಕ್ಕೊಳಗಾಗಬೇಕಾಗುತ್ತದೆ.

ಸಂಡೂರಿನಲ್ಲಿ ನಿಜವಾದ ಅಗ್ನಿಪರೀಕ್ಷೆ

ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ 2023ರಲ್ಲಿ ಗೆದ್ದಿದ್ದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತುಕರಾಂ ಪರವಾಗಿ ವಾಲ್ಮೀಕಿ ನಿಗಮದ ಹಣ ತಂದು ಹಂಚಲಾಗಿದೆ ಎಂಬ ಬಲವಾದ ಆರೋಪವಿದೆ. ಹಣದ ಬಲದಿಂದ ದಕ್ಕಿದ ಗೆಲುವು ಅಲ್ಲ ಎಂದು ಸಾಬೀತುಪಡಿಸಬೇಕಾದರೆ ಕಾಂಗ್ರೆಸ್‌ ಇಲ್ಲಿ ಗೆಲ್ಲಲೇ ಬೇಕು. ಈ ಕಾರಣಕ್ಕೆ ಸಿದ್ದರಾಮಯ್ಯ ಸಂಡೂರು ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಗೆ ಕಳೆದುಕೊಂಡ ಕ್ಷೇತ್ರವನ್ನು ಮರಳಿ ಗಳಿಸಿಕೊಳ್ಳುವ ತವಕವಿದೆ. ಗಣಿ ಹಗರಣದ ಕಾರಣದಿಂದ ದೂರವಾಗಿದ್ದ ಜನಾರ್ದನ ರೆಡ್ಡಿ ಪಡೆಯನ್ನು ಮತ್ತೆ ಹತ್ತಿರಕ್ಕೆಳೆದುಕೊಂಡು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮಾಜಿ ಸಚಿವ ಶ್ರೀರಾಮುಲು ಸೇರಿ ಹಲವು ಬಿಒಜೆಪಿ ನಾಯಕರು ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಸಂಡೂರು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾದರೆ ಅದು ಕಾಂಗ್ರೆಸ್‌ಗೆ ನೀಡುವ ಬಲವಾದ ಹೊಡೆತವಾಗುತ್ತದೆ. ಈ ಕಾರಣಕ್ಕೆ ಬಿಜೆಪಿ ಪಾಲಿಗೆ ಸಂಡೂರು ನಿಜವಾದ ಪ್ರತಿಷ್ಠೆಯ ಕಣ.
ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಸುಮಾರು ಒಂದು ದಶಕದ ನಂತರ ಬಳ್ಳಾರಿ ಪ್ರದೇಶದಲ್ಲಿ ರೆಡ್ಡಿ ನಾಯಕತ್ವ ಮತ್ತೆ ಮುನ್ನೆಲೆಗೆ ಬರಲಿದೆ. ಹಗರಣಗಳು, ಭ್ರಷ್ಟಾಚಾರದ ಆರೋಪ ಮತ್ತು ವಕ್ಫ್‌ ನೋಟಿಸ್‌ಗಳಿಂದ ವಿವಾದಕ್ಕೆ ಸಿಲುಕಿರುವ ಸರ್ಕಾರದ ಮೇಲೆ ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿಯಿಂದ ನಿರಂತರ ದಾಳಿಗೆ ಒಳಗಾಗಿರುವ ಸಮಯದಲ್ಲಿ ಉಪಚುನಾವಣೆಯಲ್ಲಿ ಸೋಲು ಕಂಡರೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ನಾಯಕತ್ವಕ್ಕೆ ದೊಡ್ಡಮಟ್ಟದ ಹಿನ್ನಡೆಯುಂಟಾಗುತ್ತದೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದರೂ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಜನಾಭಿಪ್ರಾಯ ಎಂದು ಪರಿಗಣಿಸಲಾಗುವುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಸಿಎಂ ಆಗಬೇಕೆಂಬ ಆಕಾಂಕ್ಷೆಯಲ್ಲಿ ಹಲವರಿದ್ದಾರೆ. ಹೀಗಾಗಿ ಉಪಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರಬಹುದು, ಇದು ಆಡಳಿತದ ಮೇಲೆ ಪರಿಣಾಮ ಬೀರಬಹುದು ಮತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಸ್ಥಾನವನ್ನು ದುರ್ಬಲಗೊಳಿಸಬಹುದು. ಯಾವ ದೃಷ್ಟಿಯಿಂದ ನೋಡಿದರೂ ಮೂರು ಕ್ಷೇತ್ರಗಳ ಉಪಚುನಾವಣೆ ಬಿಜೆಪಿ-ಜೆಡಿಎಸ್‌ ಮೈತ್ರಿಕೋಟಕ್ಕಿಂತಲೂ ಕಾಂಗ್ರೆಸ್‌ಗೇ ಹೆಚ್ಚು ಮಹತ್ವದ್ದಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top