ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ವಿಲೇಜ್ ಡಿಫೆನ್ಸ್ ಗ್ರೂಪ್ (ವಿಡಿಜಿ) ಸದಸ್ಯರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಜೈಶ್-ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಯಾದವರನ್ನು ಓಹ್ಲಿ ಕುಂಟ್ವಾರ ಗ್ರಾಮದ ನಿವಾಸಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.
ಮೃತದೇಹಗಳ ಪತ್ತೆಗೆ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಜೀರ್ ಮತ್ತು ಕುಲದೀಪ್ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋದಾಗ ಭಯೋತ್ಪಾದಕರು ಅಪಹರಿಸಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಈ ಹತ್ಯೆಗಳನ್ನು ಖಂಡಿಸಿ ಇಂತಹ ಬರ್ಬರ ಹಿಂಸಾಚಾರದ ಕೃತ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲೀನ ಶಾಂತಿಯನ್ನು ಸಾಧಿಸುವಲ್ಲಿ ಅಡಚಣೆಯಾಗಿವೆ ಎಂದು ಹೇಳಿದ್ದಾರೆ.