ಚಿಕ್ಕಮಗಳೂರು : ಕಾರ್ಕಳದ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟದ ಶಂಖೆ ವ್ಯಕ್ತವಾಗಿದೆ. ಆರು ಮಂದಿ ನಕ್ಸಲರು ಓಡಾಡಿದ್ದಾರೆ ಎಂಬ ಮಾಹಿತಿ ಹರಿದಾಡಿ ಆಧಾರದ ಮೇಲೆ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿದೆ.
ಕಳಸ ಮತ್ತು ಶೃಂಗೇರಿ ತಾಲೂಕಿನ ಘಟ್ಟ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ. ಹಲವು ವರ್ಷಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಓಡಾಟದ ಸದ್ದು ಕೇಳಿದ್ದು, ಈ ಭಾಗಗಳಲ್ಲಿ ಆತಂಕ ಹೆಚ್ಚಿಸಿದೆ.
ಈ ವರ್ಷ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಸಮಯದಲ್ಲಿ ಕರಾವಳಿ ಭಾಗದಲ್ಲಿ ನಕ್ಸಲರ ಚಲನವಲನದ ಬಗ್ಗೆ ಶಂಕೆ ಮೂಡಿತ್ತು. ಕಡಬದ ಕೊಂಬಾರು ಚೆರು ಗ್ರಾಮದ ಮನೆಗೆ ಆರು ಮಂದಿ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಇದ್ದ ನಕ್ಸಲರು ಮನೆಯಲ್ಲಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ನಕ್ಸಲ್ ನಿಗ್ರಹ ದಳ ಮಾಹಿತಿ ಪಡೆದು ಹುಡುಕಾಟ ನಡೆಸಿತ್ತು.