ರೈತನ ಆತ್ಮಹತ್ಯೆಗೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪ ಹೊರಿಸಿ ಕೇಸ್
ಬೆಂಗಳೂರು: ರೈತರೊಬ್ಬರ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ, ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವಕ್ಫ್ ನೋಟಿಸ್ ಬಂದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ಹರನಗೇರಿ ರೈತ ರುದ್ರಪ್ಪ ಆತ್ಮಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ವಕ್ಫ್ ನೋಟಿಸ್ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು.
ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮ ವರದಿಯೊಂದನ್ನು ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ‘ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ಉಲ್ಲೇಖಿಸಿದ್ದರು. ಇದೀಗ ಈ ಟ್ವೀಟನ್ನು ಅಳಿಸಿಹಾಕಲಾಗಿದೆ.
ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ಆತ್ಮಹತ್ಯೆಗೆ ಶರಣಾಗಿಲ್ಲ. ಅವರು ಸಾಲಬಾಧೆಯಿಂದ ನೊಂದಿದ್ದರು ಎಂದು ಪೊಲೀಸ್ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದವು. ಏತನ್ಮಧ್ಯೆ ರುದ್ರಪ್ಪ ಕುಟುಂಬಸ್ಥರು ಗುರುವಾರ ವಕ್ಫ್ ಜಂಟಿ ಸದನ ಸಮಿತಿಯ ಅಧ್ಯಕ್ಷರಿಗೂ ಮನವಿ ಸಲ್ಲಿಸಿದ್ದರು. ವಕ್ಫ್ ಬೋರ್ಡ್ನಿಂದಾಗಿ ಅನ್ಯಾಯ ಆಗಿದೆ ಎಂದು ದೂರು ನೀಡಿದ್ದರು.