ಕಾರ್ಕಳ: ಈದು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದಾರೆ ಎಂದು ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಕೆಲವು ಸ್ಥಳೀಯರು ಹೇಳಿಕೊಂಡಿದ್ದಾರೆ. ಆ ಬಳಿಕ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಚಟುವಟಿಕೆ ಮತ್ತೆ ಪ್ರಾರಂಭವಾಗಿದೆಯೇ ಎಂಬ ಅನುಮಾನ ಮೂಡಿದೆ.
30ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ಹಾಡಹಗಲೇ ಕಾಣಸಿಕ್ಕಿದ್ದಾರೆ ಎಂಬ ಸುದ್ದಿ ಕಳೆದ ಮೂರು ದಿನಗಳಿಂದ ಹರಿದಾಡುತ್ತಿದೆ. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದ ಸ್ಥಳ ಈದು ಬೊಲ್ಲೊಟ್ಟುನಿಂದ ಸುಮಾರು 1 ಕಿ.ಮೀ. ದೂರದಲ್ಲಿಯೇ ಈ ಬಾರಿ ನಕ್ಸಲರು ಕಾಣಸಿಕ್ಕಿದ್ದಾರೆ ಎನ್ನಲಾಗುತ್ತಿದೆ.
ಕೇರಳದಲ್ಲಿ ನಕ್ಸಲ್ ಎನ್‌ಕೌಂಟರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಕ್ಸಲ್ ವಲಸೆ ಆರಂಭಗೊಂಡಿದೆ ಎನ್ನುವ ಸಂದೇಹಗಳು ವ್ಯಕ್ತವಾಗಿವೆ. 2002 ಪಶ್ಚಿಮಘಟ್ಟದ ನೆಮ್ಮಾರ್ ಕೊಗ್ರದ ಚೀರಾಮ್ಮ ಎಂಬಾಕೆಯ ಮನೆಯಲ್ಲಿ ಚಿಮ್ಮಿದ ಗುಂಡು ನಕ್ಸಲ್ ಇರುವಿಕೆ ಗೊತ್ತುಪಡಿಸಿತು. ನಕ್ಸಲ್ ಚಟುವಟಿಕೆ ತೀವ್ರಗೊಂಡ ಬೆನ್ನಲ್ಲೇ 2003ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟುನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಠಿಕಾಣಿ ಹೂಡಿದ ನಕ್ಸಲ್ ತಂಡದ ಮೇಲೆ ಅಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಹಾಗೂ ಪೊಲೀಸ್ ಅಧಿಕಾರಿ ಅಶೋಕನ್ 2003 ನವಂಬರ್ 17ರಂದು ಎನ್ ಕೌಂಟರ್ ನಡೆಸಿದ ಪರಿಣಾಮ ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋದಾ ಗಾಯಗೊಂಡಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು.
ಅಲ್ಲಿಂದ ಆರಂಭವಾದ ನಕ್ಸಲ್ ಚಟುವಟಿಕೆ ಮುಂದುವರಿದಿದ್ದು, 2010 ಮಾ.1ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನ ಎನ್‌ಕೌಂಟರ್ ಆಗಿದ್ದರೆ, ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ 20011ರ ಡಿಸೆಂಬರ್ ತಿಂಗಳಲ್ಲಿ ತಿಂಗಳೆ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಆ ಬಳಿಕದ ದಿನಗಳಲ್ಲಿ ತಣ್ಣಗಾಗುತ್ತಾ ಸಾಗಿದ ನಕ್ಸಲ್ ಚಟುವಟಿಕೆ, ಇದೀಗ ಮತ್ತೆ ಗರಿಗೆದರುತ್ತಿರುವ ಆತಂಕಕಾರಿ ಬೆಳವಣಿಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುದ್ದಿಯಾಗುತ್ತಿದೆ.
ನಕ್ಸಲರ ಚಟುವಟಿಕೆಗಳು ಕಡಿಮೆಗೊಂಡಿದೆ ಎನ್ನುವ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆಯಲ್ಲೂ ಸಡಿಲಿಕೆ ಮಾಡಿದೆ. ಕಾರ್ಕಳದ ಪೇಟೆಯಲ್ಲಿ ಪ್ರತ್ಯೇಕವಾದ ಎಎನ್‌ಎಫ್ ಕೇಂದ್ರವಿದ್ದು, ಪಶ್ಚಿಮಘಟ್ಟದಲ್ಲಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೆಚ್ಚಿನ ಅನುಭವಿ ಎಎನ್‌ಎಫ್ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆಗೊಳಿಸಲಾಗಿದ್ದು, ಹೊಸ ಸಿಬ್ಬಂದಿ ಎಎನ್‌ಎಫ್‌ಗೆ ನೇಮಕಗೊಂಡಿದ್ದಾರೆ.
ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಪೊಲೀಸ್ ಇಲಾಖೆಯಿಂದ ನಡೆಯುತ್ತಿತ್ತು. ನಕ್ಸಲರ ಮಾಹಿತಿಯುಳ್ಳ ಭಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಆ ಕಾರ್ಯಕ್ರಮಗಳು ಇಲಾಖೆಯಿಂದ ನಡೆಯುತ್ತಿಲ್ಲ ಎನ್ನಲಾಗಿದೆ.