ಅಬಕಾರಿ ಸಚಿವರ ಆಪ್ತ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರ

ಲೈಸೆನ್ಸ್‌ ಕೊಡಿಸುವುದಾಗಿ ನಂಬಿಸಿ ಬಾರ್‌ ಮಾಲೀಕರಿಗೆ ಕೋಟ್ಯಂತರ ರೂ. ವಂಚನೆ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಭ್ರಷ್ಟಾಚಾರದ ಸೂತ್ರಧಾರ ಅಬಕಾರಿ ಸಚಿವ ಆರ್​​.ಬಿ ತಿಮ್ಮಾಪುರ ಅವರ ಆಪ್ತ ಜೀವನ್ ಶೆಟ್ಟಿ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ ಇಷ್ಟೊಂದು ಅಕ್ರಮ ನಡೆಯಲು ಜೀವನ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಇವರು ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ಬಾರ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್​.ಬಿ ತಿಮ್ಮಾಪುರ ಅಬಕಾರಿ ಸಚಿವರಾಗಿದ್ದನಿಂದಲೂ ಅವರ ಆಪ್ತನಾಗಿ ಜೀವನ್ ಶೆಟ್ಟಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ನೂರಾರು ‌ಮದ್ಯ ಮಾರಾಟಗಾರರ ಬಳಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ಮದ್ಯ ಮಾರಾಟಗಾರನಿಗೂ ಒಂದೂ ಲೈಸೆನ್ಸ್ ಕೂಡ ಕೊಡಿಸಿಲ್ಲ. ಹಣ ಕೊಟ್ಟವರು ವಾಪಸ್ ಕೇಳಿದರೆ ನಿಮ್ಮ ಹಣವನ್ನು ತಿಮ್ಮಾಪುರ ಅವರಿಗೆ ನೀಡಿದ್ದೇನೆ ಎಂದು ಬೆದರಿಸುತ್ತಿದ್ದರು ಎಂದು ಬಾರ್‌ ಮಾಲೀಕರು ಆರೋಪಿಸಿದ್ದಾರೆ.

ಜೀವನ್ ಶೆಟ್ಟಿ ಮದ್ಯ ಮಾರಾಟಗಾರರಿಗೆ ಮಾತ್ರವಲ್ಲ, ಅಬಕಾರಿ ಇಲಾಖೆಯ ಅನೇಕ ಅಧಿಕಾರಿಗಳಿಗೆ ಕೂಡ ವರ್ಗಾವಣೆ, ಬಡ್ತಿ ಕೊಡಿಸುತ್ತೇನೆ ಎಂದು ನಂಬಿಸಿ ಒಂದೇ ಪೋಸ್ಟ್​​​ಗೆ ನಾಲ್ಕೈದು ಅಧಿಕಾರಿಗಳಿಂದ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ಆರೋಪವಿದೆ.







































 
 

ಅಧಿಕಾರಿಯಿಂದಲೇ ರಾಜ್ಯಪಾಲರಿಗೆ ದೂರು

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ದೂರು ನೀಡಿದ್ದು ಬಾರ್‌ ಮಾಲೀಕರಲ್ಲ ಬದಲಾಗಿ ಅಬಕಾರಿ ಇಲಾಖೆಯ ಓರ್ವ ಅಧಿಕಾರಿ ಎನ್ನುವು ಮಾಹಿತಿ ಬಹಿರಂಗವಾಗಿದೆ. ಅಧಿಕಾರಿ ಅಬಕಾರಿ ಸಚಿವರ ಆಪ್ತನಿಗೆ ಹಣ ಕೊಟ್ಟು ಮೋಸ ಹೋಗಿದ್ದಾರಂತೆ. ಹಾಗಾಗಿ ವಿವರವಾದ ಮಾಹಿತಿಯನ್ನು ರಾಜ್ಯಪಾಲರಿಗೆ ಇ-ಮೇಲ್ ಮಾಡಿ ದೂರು ಸಲ್ಲಿಸಿದ್ದಾರೆ.
ಯಾವ ಹುದ್ದೆಗೆ ಎಷ್ಟು ಹಣವನ್ನು ಅಬಕಾರಿ ಸಚಿವರ ಕಚೇರಿಯ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯೊಂದಿಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಅಬಕಾರಿ ಸಚಿವ ತಿಮ್ಮಾಪುರ ಕಚೇರಿಯ ಕೆಲ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಅಕ್ರಮವಾಗಿ 16 ಕೋಟಿ ರೂಪಾಯಿ ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಸಂಗ್ರಹಿಸಿದ್ದಾರೆ. 3 ಅಬಕಾರಿ ಉಪಆಯುಕ್ತರು, 9 ಸೂಪರಿಟೆಂಡೆಂಟ್, 13 ಡೆಪ್ಯುಟಿಸೂಪರಿಂಟೆಂಡೆಂಟ್, 20 ಅಬಕಾರಿ ಇನ್​​ಸ್ಪೆಕ್ಟರ್‌ಗಳಿಂದ ತಲಾ ಇಂತಿಷ್ಟು ಎಂಬ ಲೆಕ್ಕದಲ್ಲಿ ಹಣ ಸಂಗ್ರವಾಗಿರುವ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಇ-ಮೇಲ್ ಮೂಲಕ ಮನವಿ ಮಾಡಲಾಗಿದೆ. ಇದೇ ಮೇಲ್​ ಅನ್ನು, ಸಿಎಂ ಕಚೇರಿ, ಲೋಕಾಯುಕ್ತ ಬೆಂಗಳೂರು, ಎಡಿಜಿಪಿ ಲೋಕಾಯುಕ್ತ ಬೆಂಗಳೂರು ಕೇಂದ್ರ ಸಚಿವ ಎಚ್.​ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೂ ಕಳುಹಿಸಲಾಗಿದೆ.

ಬಸವರಾಜ್ ಸಂದಿವಾಡ ಎಂಬಾತನೇ ಡೀಲ್ ಹಣ ಸಂಗ್ರಹಿಸಿ ಅಬಕಾರಿ ಸಚಿವರಿಗೆ ನೀಡಿದ್ದಾನೆ. ಬೆಂಗಳೂರು ಜಿಲ್ಲೆಗೆ ಅಬಕಾರಿ ಇನ್​ಸ್ಪೆಕ್ಟರ್​ಗಳ ವರ್ಗಾವಣೆಗೆ ಒಬ್ಬರಿಂದ 40ರಿಂದ 50 ಲಕ್ಷ ರೂ, ಸೂಪರಿಂಟೆಂಡೆಂಟ್ ಅಧಿಕಾರಿಗಳ ವರ್ಗಾವಣೆಗೆ 25 ರಿಂದ 35 ಲಕ್ಷ ಮತ್ತು ಉಪಆಯುಕ್ತರ ವರ್ಗಾವಣೆಗೆ ತಲಾ 2.5 ರಿಂದ 3.5 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಲಾಗಿದೆ ಎಂದು ಇ-ಮೇಲ್‌ನಲ್ಲಿ ಆರೋಪಿಸಲಾಗಿದೆ.
ಜೀವನ್ ಶೆಟ್ಟಿ ಬಗ್ಗೆ ಮದ್ಯ ಮಾರಾಟಗಾರರು ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಈತ ಹಿಂದಿನಿಂದಲೂ ಅಬಕಾರಿ ಸಚಿವ ಆರ್​​.ಬಿ ತಿಮ್ಮಾಪುರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top