ಮುಡಾ ಹಗರಣ : ಇಂದು ಲೋಕಾಯುಕ್ತ ವಿಚಾರಣೆ ಎದುರಿಸಲು ಸಿದ್ದರಾಮಯ್ಯ ಸಿದ್ಧ

ರಾತ್ರಿ ವಿಮಾನ ನಿಲ್ದಾಣದಲ್ಲೇ ಆಪ್ತ ಸಚಿವರ ಜೊತೆ ರಹಸ್ಯ ಸಮಾಲೋಚನೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತದ ತನಿಖೆ ಎದುರಿಸಲಿದ್ದಾರೆ. ಈಗಾಗಲೇ ಮುಡಾ ಕೇಸ್ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯನವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಒಂದನೇ ಆರೋಪಿ ಎಂದು ಹೆಸರಿಸಲಾಗಿರುವ ಸಿದ್ದರಾಮಯ್ಯನವರಿಗೆ ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದು, ಅದರಂತೆ ಉಪಚುನಾವಣೆ ಪ್ರಚಾರದ ನಡುವೆಯೇ ಸಿದ್ದರಾಮಯ್ಯ ವಿಚಾರಣೆ ಎದುರಿಸಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಖುದ್ದು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ವಿಚಾರಣೆ ಹಿನ್ನೆಲೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೈಸೂರು ಸಿಟಿ ಕಮಿಷನರ್ ಸೀಮಾ ಲಾಟ್ಕರ್ ಮಂಗಳವಾರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ನೂರಾರು ಬ್ಯಾರಿಕೇಡ್‌ಗಳನ್ನು ತರಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಇಂದಿನ ಲೋಕಾಯುಕ್ತ ವಿಚಾರಣೆ ಎದುರಿಸಲು ಮೊದಲು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸಮಯ ಕಾಯ್ದಿರಿಸಿದ್ದರು. ಆದರೆ ಸಿಎಂ ಅವರೇ ವಿಚಾರಣೆಗೆ ಗಡುವು ಹಾಕಿಕೊಟ್ಟಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ 9.30ಕ್ಕೆ ಮೈಸೂರಿಗೆ ಸಿದ್ದರಾಮಯ್ಯ ತೆರಳಲಿದ್ದು, ಬೆಳಗ್ಗೆ 9.30ರ ನಂತರ ವಿಚಾರಣೆಗೆ ಸಮಯ ಕಾಯ್ದಿರಿಸಲಾಗಿದೆ ಎಂದಷ್ಟೇ ಉಲ್ಲೇಖಿಸಲಾಗಿದೆ.
ಲೋಕಾಯುಕ್ತ ಪೊಲೀಸರಿಂದ ನಡೆಯುವ ಸಿಎಂ ವಿಚಾರಣೆಗೆ ಬಿಜೆಪಿ ನಾಯಕರು ಮಾತಿನ ಚಾಟಿ ಬೀಸಿದ್ದಾರೆ. ಸಿದ್ದರಾಮಯ್ಯ ವಿಚಾರಣೆ ಎದುರಿಸುತ್ತಿರುವುದು ಸಿಎಂ ಆಗಿಯಾ ಅಥವಾ ಆರೋಪಿಯಾಗಿಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ. ಲೋಕಾಯುಕ್ತ ವಿಚಾರಣೆ ಡ್ರಾಮಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಮುಡಾ ಹಗರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ನನ್ನನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಲು ಮೋದಿ, ದೇವೇಗೌಡ ಒಂದಾಗಿದ್ದಾರೆ. ಅವರಿಗೆ ನಾನು ಬಗ್ಗಲ್ಲ ಎಂದು ಸಿದ್ದರಾಮಯ್ಯ ಮತ್ತೆ ಹೇಳಿಕೊಂಡಿದ್ದಾರೆ. ಸುಳ್ಳು ಕೇಸ್‌ನಲ್ಲಿ ಹೇಳಿಕೆ ಕೊಡುವ ಸ್ಥಿತಿ ಬಂತಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಡಾ ಕೇಸ್‌ನಲ್ಲಿ ಇಂದು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಮಂಗಳವಾರ ರಾತ್ರಿ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಆಪ್ತ ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ ಜತೆ ಗೌಪ್ಯ ಸಮಾಲೋಚನೆ ನಡೆಸಿದ್ದಾರೆ.

ಈ ನಡುವೆ ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ಮಂಗಳವಾರ ಇದರ ವಿಚಾರಣೆ ನಡೆಯುತು. ಮುಂದಿನ ವಿಚಾರಣೆ ನವೆಂಬರ್ 26ಕ್ಕೆ ನಿಗದಿಪಡಿಸಲಾಗಿದೆ. ನವೆಂಬರ್ 25ವರೆಗೆ ನಡೆದ ತನಿಖೆಯ ವಿವರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಒಂದು ವೇಳೆ ಸಿಬಿಐ ತನಿಖೆಗೆ ನ್ಯಾಯಾಲಯ ಅವಕಾಶ ಸಿಕ್ಕರೆ ಪ್ರಕರಣದ ದಿಕ್ಕು ಬದಲಾಗಲಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top