ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಹಾಗೂ ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಪುತ್ತೂರು ಘಟಕದ ಸಹಯೋಗದಲ್ಲಿ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ “ಸ್ವಯಂಪ್ರೇರಿತ ರಕ್ತದಾನ ಶಿಬಿರ” ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗೀ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸೀತಾರಾಮ ಭಟ್, ರಕ್ತದಾನ ಶ್ರೇಷ್ಠ ದಾನವಾಗಿದೆ. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರಕುತ್ತದೆ. ಜತೆಗೆ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಉಂಟಾಗದಂತೆ ಮಾಡಬಹುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮಹಮ್ಮದ್ ಸಾಹೀಬ್, ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಪುತ್ತೂರು ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ ಭಾಗ್ಯಶ್ರೀ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ಸಹಾಯಕ ಪ್ರಾಧ್ಯಾಪಕಿ ಹಾಗೂ ಯೂತ್ ರೆಡ್ ಕ್ರಾಸ್ ನ ಸಂಯೋಜಕಿ ಶ್ವೇತಾ ವಿಶ್ವೇಶ್ವರ ಹೆಗಡೆ, ಸಹಾಯಕ ಪ್ರಾಧ್ಯಾಪಕ, ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ಎ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ರಾಮಚಂದ್ರ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಸದಸ್ಯರಾದ ಉದ್ಯಮಿ ಮಾರ್ಟೀಸ್ ಸೇರಿದಂತೆ ಹಲವು ಗಣ್ಯರು, ಪುತ್ತೂರು ಬ್ಲಡ್ ಬ್ಯಾಂಕ್ ಸಿಬ್ಬಂದಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರದ್ದಾ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಚಿಕೇತ್ ಸ್ವಾಗತಿಸಿ, ವಿದ್ಯಾರ್ಥಿ ಅಜಯ್ ಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.