ಪುತ್ತೂರು: ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತೀಯವರು ಭಾನುವಾರ ಬೋವಿಕಾನ ಬಾವಿಕೆರೆ ಎಂಬಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಮತಾಂಧ ಕಿಡಿಗೇಡಿಗಳು ಸ್ವಾಮೀಜಿಯವರು ಹೋಗುತ್ತಿದ್ದ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜನ್ನು ಹೊಡೆದು ಹಾನಿಗೊಳಿಸಿದರೆಂದು ತಿಳಿದು ಬಂದಿದ್ದು, ಈ ಘಟನೆಯಲ್ಲಿ ಭಾಗಿಯಾದ ಮತಾಂಧ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಕೇರಳ ಸರಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ದಾರಿಯುದ್ದಕ್ಕೂ ಎಡನೀರು ಸ್ವಾಮೀಜಿಯೆಂದು ತಿಳಿದಿದ್ದರೂ ಅವರನ್ನು ತಡೆದು ನಿಲ್ಲಿಸಿ, ಅವರನ್ನು ಅವಮಾನ ಮಾಡುವ ಕೆಲಸ ರಾಜ್ಯ ರಸ್ತೆಯಲ್ಲಿ ಮಾಡುತ್ತಾರೆ ಎಂದಾದರೆ ಜನಸಾಮಾನ್ಯ ಹಿಂದೂಗಳು ರಸ್ತೆಯಲ್ಲಿ ಹೇಗೆ ಓಡಾಟ ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ
ಎಡನೀರು ಮಠ ದೇಶದ ಸಮಸ್ತ ಹಿಂದೂಗಳಿಗೆ ಶ್ರದ್ಧಾ ಕೇಂದ್ರ. ಸ್ವಾಮೀಜಿಯವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೆಲಸ ಮಾಡುತ್ತಾ ಇಡೀ ಸಮಾಜದ ಒಳಿತಿಗೆ ಶ್ರಮಿಸುತ್ತಿರುವ ಸಂಧರ್ಭದಲ್ಲಿ ಅವರನ್ನು ಈ ರೀತಿ ಅವಮಾನ ಮಾಡುತ್ತಿರುವ ಮತಾಂಧ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಪೂಜ್ಯ ಸ್ವಾಮೀಜಿಯವರಿಗೆ ಕೇರಳ ಸರಕಾರ ಹಾಗೂ ಕರ್ನಾಟಕ ಸರಕಾರ ಸೂಕ್ತ ರಕ್ಷಣೆ ನೀಡಬೇಕು. ಒಂದು ಸ್ವಾಮೀಜಿಯನ್ನು ತಡೆದು ದೊಣ್ಣೆಯಿಂದ ವಾಹನಕ್ಕೆ ಬಡಿದು ಹೆದರಿಸುವುದು ಕೇವಲ ಓರ್ವ ಸ್ವಾಮೀಜಿಗೆ ಆದ ಅವಮಾನ ಅಲ್ಲ ಇಡೀ ಹಿಂದೂ ಸಮಾಜಕ್ಕೆ ಆದ ಅವಮಾನ. ಆದ್ದರಿಂದ ಇಡೀ ಹಿಂದೂ ಸಮಾಜ ಈ ಘಟನೆಯನ್ನು ಖಂಡಿಸಿ ಕೇರಳದಲ್ಲಿ ಮತ್ತೆ ಇಂತಹ ಘಟನೆ ನಡೆಯದ ರೀತಿಯಲ್ಲಿ ಕೇರಳ ಪೊಲೀಸ್ ಇಲಾಖೆ ಹಾಗೂ ಸರಕಾರ ಎಲ್ಲಾ ಮಠ ಮಂದಿರ ಸ್ವಾಮೀಜಿಯವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.