ಮಂಗಳೂರು: 2023ನೇ ಸಾಲಿನ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿಯನ್ನು ಡಾ. ಕೆ. ಚಿನ್ನಪ್ಪ ಗೌಡ ಅವರಿಗೆ ಘೋಷಿಸಲಾಗಿದೆ.
ಜನಪದ ಆರಾಧನೆಯ ‘ಮಧ್ಯಂತರ ಜಗತ್ತು’ ಮತ್ತು ಅದರ ‘ಸಂಕೀರ್ಣ ಪಠ್ಯ’, ಜಾನಪದದ ಅರ್ಥ ಮತ್ತು ಕಾರ್ಯಗಳ ವಿವೇಚನೆ, ಜಾನಪದ ಪ್ರಕಾರವೊಂದರ ಪ್ರದರ್ಶನ ಸಂದರ್ಭದ ಆಚೆಗಿರುವ ವಿವರಗಳ ಪರಿಕಲ್ಪನೆಗಳನ್ನು ವಿವರಿಸಿ ಜಾನಪದ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಸಿಕೊಂಡವರು ಡಾ. ಕೆ.ಚಿನ್ನಪ್ಪ ಗೌಡ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭೂತಾರಾಧನೆಯ ಅತ್ಯಂತ ಪ್ರಾಚೀನವೂ ವಿಶಿಷ್ಟವೂ ಆದ ‘ಜಾಲಾಟ’ದ ವೈಶಿಷ್ಟ್ಯಗಳನ್ನು ಮೊದಲು ವಿವರಿಸಿದವರು. ಸಿರಿ ಮಹಾಕಾವ್ಯದ ನಿರ್ಮಾಣ ಮತ್ತು ಮರುಕಟ್ಟುವಿಕೆ, ಕಲಿಕೆ ಮತ್ತು ಪ್ರಸಾರದ ವಿವಿಧ ನೆಲೆಗಳ ಬಗ್ಗೆ ತೌಲನಿಕ ಅಧ್ಯಯನವನ್ನು ನಡೆಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ 17 ಪುಸ್ತಕಗಳು ಮತ್ತು 75ಕ್ಕಿಂತ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ, ತುಳು ಸಾಹಿತ್ಯ, ಸಂಶೋಧನೆ, ಯಕ್ಷಗಾನ ಸೇರಿದಂತೆ 75 ಕೃತಿಗಳನ್ನು ಸಂಪಾದಿಸಿದ್ದಾರೆ.
ತುಳು ಭಾಷೆಯಲ್ಲಿರುವ ಅರುವತ್ತು ಜನಪದ ಕತೆಗಳನ್ನು ಮತ್ತು ಕೆಲಸದ ಹಾಗೂ ಕುಣಿತದ ಐವತ್ತು ಹಾಡುಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಕೊಡುವುದರ ಮೂಲಕ ಜಾಗತಿಕ ಜಾನಪದ ಅಧ್ಯಯನಕಾರರಿಗೆ ತುಳುವಿನ ಎಠಡು ಮಹತ್ವದ ಜನಪದ ಪ್ರಕಾರಗಳನ್ನು ಪರಿಚಯಿಸಿದ್ದಾರೆ. ‘ಕರಾವಳಿ ಕಥನಗಳು’ ಸಂಶೋಧನ ಲೇಖನಗಳ ಸಂಪುಟವಾಗಿದೆ. ಇದರಲ್ಲಿ ತುಳು ಜಾನಪದ, ತುಳು ಸಾಹಿತ್ಯ, ಯಕ್ಷಗಾನ, ಅನುವಾದ ಈ ವಿಷಯಗಳಿಗೆ ಸಂಬಂಧಿಸಿದ ಎಂಟು ಸವಿಸ್ತಾರವಾದ ಲೇಖನಗಳಿವೆ. ಸಾಂಸ್ಕೃತಿಕ ಅಧ್ಯಯನದ ಇತ್ತೀಚಿನ ಪ್ರವೃತ್ತಿಗಳನ್ನು ಅಳವಡಿಸಿಕೊಂಡು ಇವರು ತುಳು ಜಾನಪದ ಅಧ್ಯಯನವನ್ನು ನಡೆಸಿದ್ದಾರೆ.