5 ಕೋಟಿ ರೂ. ಕೊಟ್ಟು, ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸದಿದ್ದರೆ ಫಿನಿಶ್ ಎಂದು ಧಮಕಿ
ಮುಂಬಯಿ : ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಈ ಸಲ ಬೆದರಿಕೆ ಹಾಕಿದವ ಲಾರೆನ್ಸ್ ಬಿಷ್ಣೋಯ್ಯ ಸಹೋದರನ ಹೆಸರು ಹೇಳಿಕೊಂಡಿದ್ದಾನೆ. ಇದರೊಂದಿಗೆ ಕಳೆದ 10 ದಿನಗಳಲ್ಲಿ ಸಲ್ಮಾನ್ಗೆ ಮೂರು ಬೆದರಿಕೆಗಳು ಬಂದಿವೆ.
ಮುಂಬಯಿ ಟ್ರಾಫಿಕ್ ಪೊಲೀಸರಿಗೆ ಕರೆ ಬಂದಿದ್ದು, ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಿ ತಪ್ಪಾಯ್ತು ಎಂದು ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂ. ಕೊಡಬೇಕು, ಇಲ್ಲದಿದ್ದರೆ ಕೊಲ್ಲುವುದೊಂದೇ ದಾರಿ ಎಂದು ಹೇಳಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ಹೇಳಿಕೊಂಡ ವ್ಯಕ್ತಿ ಈ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಮಾಪ್ತರಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ದಸರಾ ದಿನದಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ಬಳಿಕ ಸಲ್ಮಾನ್ ಖಾನ್ ಭಯದಿಂದಲೇ ಬದುಕುತ್ತಿದ್ದಾರೆ. ತನ್ನ ಭದ್ರತೆಗಾಗಿ ಅವರು 2 ಕೋಟಿ ರೂ. ಬೆಲೆಬಾಳುವ ಬುಲೆಟ್ ಪ್ರೋಫ್ ಕಾರು ಖರೀದಿಸಿದ್ದಾರೆ. ಮುಂಬಯಿ ಪೊಲೀಸರು ಕೂಡ ಅವರಿಗೆ ದಿನದ 24 ತಾಸು ಭದ್ರತೆ ಒದಗಿಸುತ್ತಿದ್ದಾರೆ. ಇದರ ಜೊತೆಗೆ ಸಲ್ಮಾನ್ ತನ್ನ ಖಾಸಗಿ ಅಂಗರಕ್ಷಕ ಪಡೆಯನ್ನೂ ಸದೃಢಗೊಳಿಸಿಕೊಂಡಿದ್ದಾರೆ.
ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್ಗೆ ಪದೇಪದೆ ಬೆದರಿಕೆ ಕರೆಗಳು ಬರುತ್ತಿವೆ. ಹೆಚ್ಚಿನ ಕರೆಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಇಂಥ ಬೆದರಿಕೆ ಹಾಕಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಇಂದು ಬಂದಿರುವ ಕರೆಯೂ ಇದೇ ರೀತಿ ಇರಬಹುದು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.