ಪುತ್ತೂರು: ಸಿದ್ಧರಾಮಯ್ಯ ನೇತೃತ್ವದ ಸರಕಾರ ಮತಬ್ಯಾಂಕ್ ಗಾಗಿ ಮುಸ್ಲಿಂರ ತುಷ್ಠೀಕರಣ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುವ ಹುನ್ನಾರು ನಡೆಸುತ್ತಿರುವುದರ ಜತೆಗೆ ವಕ್ಫ್ ಹೆಸರಲ್ಲಿ ಬಡವರ ಭೂಮಿಯನ್ನು ಕಬಳಿಸುವ ಪ್ರಯತ್ನದಲ್ಲಿದೆ ಎಂದು ಬಿಜೆಪಿ ರಾಜ್ಯ ಪದಾಧಿಕಾರಿ ವಿಶ್ವೇಶ್ವರ ಭಟ್ ಬಂಗಾರಡ್ಕ ಆರೋಪಿಸಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ದರ್ಬೆ ವೃತ್ತದ ಬಳಿ ರೈತ ವಿರೋಧಿ ಕಾಂಗ್ರೆಸ್ ಸರಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮವನ್ನು ವಿರೋಧಿಸಿ ನಡೆಸಿದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ವಿಚಾರದಲ್ಲಿ ಭ್ರಷ್ಟಾಚಾರ ಮಾಡುತ್ತಿದೆ. ಇದೀಗ ಅಲ್ಪಸಂಖ್ಯಾತರು ಅಧಿಕವಿರುವ ಜಿಲ್ಲೆಗಳಿಗೆ ತೆರಳಿ ವಕ್ಫ್ ಹೆಸರಲ್ಲಿ ರೈತರ, ಬಡವರ ಭೂಮಿ ಕಬಳಿಕೆ ಹುನ್ನಾರ ಮಾಡುವ ಮೂಲಕ ಜನತೆಯನ್ನು ಕತ್ತಲಿಗೆ ತಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರು ಮುಂದಿನ ದಿನಗಳಲ್ಲಿ ಜಾಗೃತರಾಗಬೇಕು ಎಂದು ಹೇಳಿದ ಅವರು, ವಕ್ಫ್ ವಿಚಾರ ಮುಖ್ಯಮಂತ್ರಿ ಸಿದ್ಧರಾಮಯ್ಯರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿದ್ಧರಾಮಯ್ಯ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೇ ಆಕ್ರೋಶ ವ್ಯಕ್ತವಾಗಿರುವುದು ಕಂಡು ಬಂದಿದ್ದು, ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗ ವಕ್ಫ್ ನಂತಹ ದುರುಪಯೋಗದ ಸಂಗತಿ ಬಿಜೆಪಿಯ ಅಜೆಂಡಾದಲ್ಲೇ ಇರಲಿಲ್ಲ. ಕಾಂಗ್ರೆಸ್ ಸರಕಾರದ ಈ ಲ್ಯಾಂಡ್ ಜಿಹಾದಿಯನ್ನು ಬಿಜೆಪಿ ಸಹಿತ ಸಾರ್ವಜನಿಕರು ಖಂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟ ಆಡಳಿತದಿಂದ ಬಿಜೆಪಿ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದಿದೆ. ಇದು ಕೋಣನ ಮುಂದೆ ತಂಬೂರಿ ಬಾರಿಸಿದಂತೆ ಸಿದ್ಧರಾಮಯ್ಯ ಸರಕಾರಕ್ಕೆ ಆಗಿದೆ ಎಂದ ಅವರು, ಭ್ರಷ್ಟಾಚಾರ ನಡೆಸಿದರೂ ವಾಪಾಸು, ವಕ್ಫ್ ಹೆಸರಲ್ಲಿ ಕಬಳಿಕೆ ನಡೆಯುತ್ತಿದ್ದರೂ ವಾಪಾಸು ಪಡೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಭ್ರಷ್ಟಾಚಾರ, ವಕ್ಫ್ ಕಬಳಿಕೆ ನಡೆಯಲೇ ಇಲ್ಲ ಎಂಬ ಭ್ರಮೆಯಲ್ಲಿ ಸಿದ್ಧರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಮಾಡಿದ್ದನ್ನು ಇದೀಗ ಬಿಜೆಪಿ ತಲೆಗೆ ಕಟ್ಟುವ ಕೆಲಸ ನಡೆಯುತ್ತಿದೆ. ಈ ಮೂಲಕ ಲ್ಯಾಂಡ್ ಜಿಹಾದಿ ಬೃಹದಾಕಾರವಾಗಿ ಬೆಳೆದಿದೆ. ಪರಿಣಾಮ ರೈತರ ಭೂಮಿ, ದೇವಸ್ಥಾನ, ಸಾಲದ್ದಕ್ಕೆ ಬೆಂಗಳೂರಿನ ವಿಧಾನಸೌಧಕ್ಕೂ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಮಾರ್ತ, ಮುಕುಂದ ಬಜತ್ತೂರು, ಜಿಲ್ಲಾ ಪ್ರಕೋಷ್ಠ ಸಂಚಾಲಕ ಚಂದ್ರಶೇಖರ ಬಪ್ಪಳಿಗೆ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್.ಗೌರಿ, ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ, ನಿತೇಶ್ ಕುಮಾರ್ ಶಾಂತಿವನ, ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಗೌರಿ ಬನ್ನೂರು, ಜಯಶ್ರೀ ಶೆಟ್ಟಿ, ಹರಿಣಿ ಪಂಜಳ, ಉಮೇಶ್ ಕೋಡಿಬೈಲು, ವಿರೂಪಾಕ್ಷ ಭಟ್, ಡಾ.ಪ್ರಸನ್ನ ಕುಮಾರ್, ಹರೀಶ್ ಬಿಜತ್ರೆ, ಪುರುಷೋತ್ತಮ ಮುಂಗ್ಲಿಮನೆ, ನಾಗೇಶ್, ಸುಭಾಸ್ ರೈ ಕಡಮಜಲು, ನಾಗೇಶ್ ಪ್ರಭು, ಮಹೇಶ್ ಕೇರಿ, ದೀಕ್ಷಾ ಪೈ ಸತೀಶ್ ನಾಯ್ಕ್, ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಭಟನೆ ಬಳಿಕ ಪುತ್ತೂರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಅನಿಲ್ ತೆಂಕಿಲ ವಂದಿಸಿದರು.