ಎರಡು ತಿಂಗಳ ಯಾತ್ರೆಗಾಗಿ ನಡೆದಿದೆ ಭರದ ಸಿದ್ಧತೆ
ಶಬರಿಮಲೆ : ಶಬರಿಮಲೆ ಯಾತ್ರಿಕರಿಗೆ ಈ ವರ್ಷ ಕೇರಳ ಸರಕಾರ 5 ಲ.ರೂ. ಉಚಿತ ವಿಮೆಯ ಸೌಲಭ್ಯ ನೀಡಲಿದೆ. ಈ ತಿಂಗಳಾಂತ್ಯದಲ್ಲಿ ಮಂಡಲ ಮತ್ತು ಮಕರವಿಳಕ್ಕು ಯಾತ್ರಾ ಋತು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೋಟಿಗಟ್ಟಲೆ ಭಕ್ತರು ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಇವರೆಲ್ಲ ಕೇರಳ ಸರಕಾರದ ವಿಮಾ ವ್ಯಾಪ್ತಿಯಲ್ಲಿರುತ್ತಾರೆ.
ಶಬರಿಮಲೆ ದೇವಸ್ಥಾನದ ಆಡಳಿತ ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಬೋರ್ಡ್ ಭಕ್ತರಿಗೆ ವಿಮಾ ಸೌಲಭ್ಯ ಒದಗಿಸಲಿದೆ. ಯಾತ್ರಿಕರು ದುರ್ಮರಣವನ್ನಪ್ಪಿದರೆ ಕುಟುಂಬಕ್ಕೆ 5 ಲ.ರೂ. ಸಿಗಲಿದೆ. ಶವವನ್ನು ಊರಿಗೆ ತಲುಪಿಸುವ ವ್ಯವಸ್ಥೆಯನ್ನೂ ದೇವಸ್ವಂ ಬೋರ್ಡ್ ಮಾಡಲಿದೆ.
ಎರಡು ತಿಂಗಳ ಯಾತ್ರೆಗಾಗಿ ಶಬರಿಮಲೆಯಲ್ಲಿ ಭರದ ಸಿದ್ಧತೆ ನಡೆದಿದೆ. ನೂಕುನುಗ್ಗಲು ತಪ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರಿಗೆ ಕುಡಿಯುವ ನೀರು, ಆಹಾರಕ್ಕೆ ಸಮಸ್ಯೆಯಾಗದಂತೆ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.
13,600 ಪೊಲೀಸರು, 2500 ಅಗ್ನಿಶಾಮಕ ಸಿಬ್ಬಂದಿ ಮತ್ತು 1000 ನೈರ್ಮಲ್ಯ ಸಿಬ್ಬಂದಿಯನ್ನು ಕೇರಳ ಸರಕಾರ ಶಬರಿಮಲೆಯಲ್ಲಿ ನಿಯೋಜಿಸಲಿದೆ. ಶಬರಿಮಲೆಯಲ್ಲಿ ಅನ್ನದಾನ ವ್ಯವಸ್ಥೆಯೂ ಇದ್ದು, ಕಳೆದ ವರ್ಷ ಸುಮಾರು 15 ಲಕ್ಷ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ. ಈ ವರ್ಷ 20 ಲಕ್ಷ ಭಕ್ತರಿಗೆ ಅನ್ನದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಾಸವನ್ ತಿಳಿಸಿದ್ದಾರೆ.