53 ಐತಿಹಾಸಿಕ ಸ್ಥಳಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು
ಬೆಂಗಳೂರು : ರಾಜ್ಯದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್ ಬೋರ್ಡ್ ತನ್ನದು ಎಂದು ಘೋಷಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿದೆ. ಇವುಗಳಲ್ಲಿ ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005ರಲ್ಲೇ ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿದೆ.
ವಕ್ಫ್ ಮಂಡಳಿ ವಿಜಯಪುರದಲ್ಲಿ 43 ಕೇಂದ್ರೀಯ ಸಂರಕ್ಷಿತ ಸ್ಮಾರಕಗಳನ್ನು ತನ್ನ ಆಸ್ತಿಗಳೆಂದು ಘೋಷಿಸಿದೆ. ಆಸ್ತಿಯ ಮಾಲೀಕರಿಗೆ ನೀಡಲಾದ ಹಕ್ಕುಗಳ ದಾಖಲೆ, ಸರ್ಕಾರದ ಪ್ರಮಾಣಪತ್ರವನ್ನೇ ಮುಂದಿಟ್ಟುಕೊಂಡು ಹೀಗೆ ಮಾಡಲಾಗಿದೆ ಎಂಬ ಅಂಶ ಆರ್ಟಿಐ ಂೂಲಕ ಬಯಲಾಗಿದೆ. ಎಎಸ್‌ಐಯನ್ನು ಸಮಾಲೋಚನೆಯಿಲ್ಲದೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂರಕ್ಷಿತ ಸ್ಮಾರಕಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು 2005ರಲ್ಲಿ ವಕ್ಫ್ ಆಸ್ತಿ ಎಂದು ಘೋಷಿಸಿದ್ದರು. ಮೊಹ್ಸಿನ್ ಅವರು ಆಗ ವಿಜಯಪುರದ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು.