ಪುತ್ತೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ಬನ್ನೂರಿನ ಚರ್ಚ್ ಆಡಳಿತ ಮಂಡಳಿ ಹಾಗೂ ಖಾಸಗಿ ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮಕಿ ಸಂಬಂಧ ಇತ್ತಂಡಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಆಸ್ಟಿನ್ ಡಿಕೊಸ್ತ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಬನ್ನೂರು ಗ್ರಾಮದಲ್ಲಿ ಒಟ್ಟು 4 ಎಕ್ರೆ ಜಮೀನಿಗೆ ಮೌರಿಸ್ ಗೊನ್ಸಾಲ್ವಿಸ್, ವಿಕ್ಟರ್ ಗೊನ್ಸಾಲ್ವಿಸ್, ದೀಕ್ಷಿತ್, ಧೀರಜ್ ಗೊನ್ಸಾಲ್ವಿಸ್, ಬೀನಾ ಗೊನ್ಸಾಲ್ವಿಸ್‌ರವರು ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಕೃಷಿ ಹಾಗೂ ಬೇಲಿಯನ್ನು ನಾಶ ಮಾಡಿದಲ್ಲದೆ ಈ ಕುರಿತು ವಿಚಾರಿಸಿದಾಗ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಬನ್ನೂರು ಮೌರಿಸ್ ಗೋನ್ಸಾಲ್ವಿಸ್ ಅವರು ಪ್ರತಿ ದೂರು ನೀಡಿದ್ದು, ನಮ್ಮ ಮನೆಗೆ ಲಾರೆನ್ಸ್ ಮಸ್ಕರೇನಸ್, ಜೆರಾಲ್ಡ್, ಝೂ ಡಿಸೋಜ, ಜೆ ಪಿ ರೋಡ್ರಿಗಸ್, ರಿಚರ್ಡ್ ರೋಶನ್, ಜೀವನ್, ಬೊನವೆಂಚರ್ ಬಲ್ನಾಡು ಸಹಿತ ಹಲವು ಮಂದಿ ಕತ್ತಿ, ದೊಣ್ಣೆ ಮತ್ತು ವಿವಿಧ ಆಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಮಾಡುವುದಾಗಿ ಬೆದರಿಸಿ ಮನೆಯಂಗಳದಲ್ಲಿದ್ದ ಅಡಿಕೆ ಒಣಗಿಸುವ ಸೋಲಾರ್ ನಾಶ ಮಾಡಿ, ನಮ್ಮ ಜಾಗಕ್ಕೆ ಅಕ್ರಮವಾಗಿ ಕಾಂಕ್ರೀಟ್ ಬೇಲಿಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಇತ್ತಂಡದವರ ದೂರು ದಾಖಲಿಸಿಕೊಂಡಿದ್ದಾರೆ.