ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಸದ್ದಿಲ್ಲದೆ ಏರಿಸಿವೆ. ನಿನ್ನೆ ವಾಣಿಜ್ಯ ಸಿಲಿಂಡರ್ ಬೆಲೆ 62 ರೂ. ಏರಿಕೆಯಾಗಿದೆ. ಇದರೊಂದಿಗೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದೆ. ಆದರೆ 14 ಕೆಜಿಯ ಗೃಹ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿತ್ತು.
ವಾಣಿಜ್ಯ ಸಿಲಿಂಡರ್ ಏರಿಕೆಯಿಂದ ಮುಖ್ಯವಾಗಿ ಹೋಟೆಲ್ ಮತ್ತು ಬೇಕರಿ ಮಾಲೀಕರಿಗೆ ಬರೆ ಎಳೆದಂತಾಗಿದೆ. ಮೂರು ತಿಂಗಳಲ್ಲಿ ಸುಮಾರು 150 ರೂ. ಏರಿಕೆಯಾಗಿರುವುದುರಿಂದ ತಿಂಡಿ ಪಾನೀಯಗಳ ಬೆಲೆ ಏರಿಸುವ ಅನಿವಾರ್ಯತೆಯಲ್ಲಿದ್ದಾರೆ.