ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 69ನೇ ವರ್ಷ ಕನ್ನಡ ರಾಜ್ಯೋತ್ಸವ ಸಮಾರಂಭ ಶುಕ್ರವಾರ ಪುರಭವನದಲ್ಲಿ ನಡೆಯಿತು.
ಸಮಾರಂಭದ ಮೊದಲು ದರ್ಬೆ ವೃತ್ತದಿಂದ ವಿವಿಧ ಶಾಲೆಗಳ ಗೈಡ್ಸ್, ಸ್ಕೌಟ್ಸ್, ವಿದ್ಯಾರ್ಥಿಗಳ ಪಥಸಂಚಲನ ಕನ್ನಡ ಭುವನೇಶ್ವರಿ ಭಾವಚಿತ್ರದೊಂದಿಗೆ, ಬ್ಯಾಂಡ್‍ವಾದ್ಯಗಳ ಸಮೇತ ಮೆರವಣಿಗೆ ಮೂಲಕ ಕಿಲ್ಲೇ ಮೈದಾನಕ್ಕೆ ಆಗಮಿಸಿತು.
ಬಳಿಕ ಕಿಲ್ಲೇ ಮೈದಾನದಲ್ಲಿ ಕನ್ನಡ ಧ್ವಜಾರೋಹಣ, ರಾಷ್ಟ್ರ ಧ್ವಜಾರೋಹಣವನ್ನು ಗಣ್ಯರು ಮಾಡುವ ಮೂಲಕ ಚಾಲನೆ ನೀಡಲಾಯಿತು.
ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.
ಬಳಿಕ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಮಂದಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕ್ರೀಡಾ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶ್ಯೂಟ್ ವಿತರಿಸಲಾಯಿತು. ಕನ್ನಡ ಭುವನೇಶ್ವರಿ ಮೆರವಣಿಗೆಗೆ ಸಹಕರಿಸಿದ 45 ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು. ವೇದಿಕೆಯಲ್ಲಿ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಹಸೀಲ್ದಾರ್ ಪುರಂದರ ಹೆಗ್ಡೆ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರಸಭೆ ಅಧ್ಯಕ್ಷೆ ಲೀಲಾವತಿ, ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಜಾನ್ಸನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.