ಪಿಲಿಕುಳದಲ್ಲಿ ಹಲವು ವರ್ಷಗಳ ಬಳಿಕ ಮೊದಲ ಕಂಬಳ
ಮಂಗಳೂರು: ಈ ಕಂಬಳ ಋತುವಿನ ಮೊದಲ ಕಂಬಳ ನ.17ರಂದು ಪಿಲಿಕುಳದಲ್ಲಿ ನಡೆಯಲಿದೆ. ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಯುತ್ತಿದ್ದರೂ ನಿಂತುಹೋಗಿ ಬಹಳ ವರ್ಷಗಳಾಗಿತ್ತು. ಹೀಗಾಗಿ ಕಂಬಳ ಋತುವನ್ನು ಪಿಲಿಕುಳದಿಂದ ಪ್ರಾರಂಭಿಸಲು ಕಂಬಳ ಸಮಿತಿ ತೀರ್ಮಾನಿಸಿದೆ. ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಒಂದೆರಡು ಕಡೆ ಸಾಂಪ್ರದಾಯಿಕವಾಗಿ ಜೂನಿಯರ್ ಮತ್ತು ಸಬ್‌ಜೂನಿಯರ್ ಕಂಬಳಗಳು ನಡೆದಿವೆ. ಇವುಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳಷ್ಟೇ ಭಾಗವಹಿಸಿವೆ. ಇದೇ ಮಾದರಿಯ ಇನ್ನೊಂದು ಕಂಬಳ ನ.9ರಂದು ಪಣಪಿಲದಲ್ಲಿ ನಡೆಯಲಿದೆ. ನಂತರ ನ.17ರಂದು ಪಿಲಿಕುಳದಲ್ಲಿ ಋತುವಿನ ಮೊದಲ ಕಂಬಳ ನಡೆಯುವುದರೊಂದಿಗೆ ಕಂಬಳ ಋತು ಶುರುವಾಗಲಿದೆ.
ಈ ಬಾರಿ ಕಂಬಳಕ್ಕೆ ಸಾಕಷ್ಟು ಕಟ್ಟುನಿಟ್ಟಾದ ನಿಯಮಗಳನ್ನು ಕಂಬಳ ಸಮಿತಿ ರೂಪಿಸಿದೆ. ಸಮಯ ಪಾಲನೆಗೆ ಆದ್ಯತೆ ನೀಡಲು ಸಮಿತಿ ನಿರ್ಧರಿಸಿದೆ. ಕರೆಗೆ ಇಳಿದ ಕೋಣಗಳನ್ನು ನಿಗದಿತ ಸಮಯದ ಒಳಗೆ ಬಿಡಬೇಕು. ಗಂತಿನಲ್ಲಿ ವಿನಾಕಾರಣ ಕಾಲಹರಣ ಮಾಡುವಂತಿಲ್ಲ. ಜೂನಿಯರ್ 2 ನಿಮಿಷ ಹಾಗೂ ಸೀನಿಯರ್ 5 ನಿಮಿಷಗಳ ಒಳಗೆ ಕರೆಗೆ ಬಾರದಿದ್ದಲ್ಲಿ ಇದ್ದ ಕೋಣಗಳಿಗೆ ವಾಕ್ ಓವರ್ ನೀಡಲಾಗುವುದು ಎಂಬಿತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ.
ಒಬ್ಬ ಓಟಗಾರ ಒಂದು ವಿಭಾಗದಲ್ಲಿ ಒಂದು ಜತೆ ಕೋಣಗಳನ್ನು ಓಡಿಸಿದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶ. ಒಂದು ವಿಭಾಗದಲ್ಲಿ ಎ, ಬಿ (ಒಂದೇ ಯಜಮಾನರ) ಕೋಣಗಳನ್ನು ಓಡಿಸಿದ್ದಲ್ಲಿ 3 ವಿಭಾಗಕ್ಕೆ ಸೀಮಿತಗೊಳಿಸಲಾಗುತ್ತದೆ. ಎ, ಬಿ, ಸಿ ಮೂರು ಕೋಣಗಳನ್ನು ಓಡಿಸಿದ್ದಲ್ಲಿ ಮತ್ತೆ ಒಂದು ಜತೆ ಕೋಣ ಓಡಿಸಲು ಅವಕಾಶವಿರಲಿದೆ. ಕೋಣ ಬಿಡುವವರೂ ಒಂದು ವಿಭಾಗದಲ್ಲಿ ಒಂದು ಜತೆ ಬಿಡಬೇಕು. ಗರಿಷ್ಠ 4 ಜತೆ ಮಾತ್ರ (ಎ, ಬಿ ಅವಕಾಶ) ಇರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆ ಮುಗಿದ 10 ನಿಮಿಷಗಳಲ್ಲಿ ಮುಂದಿನ ಸ್ಪರ್ಧೆಗೆ ಚೀಟಿ ಹಾಕಬೇಕು. ಆ ಹೊತ್ತಿನಲ್ಲೇ ಯಾವ ಹೊತ್ತಿಗೆ ಸ್ಪರ್ಧೆ ಎಂಬುದನ್ನು ತಿಳಿಸಬೇಕು.
ಕಿರಿಯ ವಿಭಾಗದಲ್ಲಿ ಅತಿಹೆಚ್ಚು ಕೋಣಗಳು ಇರುವುದರಿಂದ ಈ ವ್ಯವಸ್ಥೆಗೆ ಆ್ಯಪ್ ಬಳಸಿ ಸಾಲು ನಿರ್ಣಯಿಸಲಾಗುತ್ತದೆ. ಅನುಕೂಲಕ್ಕಾಗಿ ಕರೆಗೆ ಇಳಿಯುವ ಸಂದರ್ಭ ಮಂಜೊಟ್ಟಿಯಲ್ಲೇ ಹೆಸರು ನೋಂದಣಿ ಮಾಡಿಸಬೇಕು. ಎಲ್‌ಇಡಿ ಟೈಮರ್ ಸ್ಟಾರ್ಟಿಂಗ್‌ನಲ್ಲಿ ಅಳವಡಿಸಿ ಕೋಣಗಳ ಸಮಯ ಪಾಲನೆಗೆ ಸೈರನ್ ವ್ಯವಸ್ಥೆ ಜಾರಿಗೆ ಬರಲಿದೆ.