ಪುತ್ತೂರು: ರಾಜ್ಯ ಸಿದ್ಧರಾಮಯ್ಯ ಸರಕಾರ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಮಾಡುವ ಮೂಲಕ ವಕ್ಫ್ ಆಸ್ತಿ ಹೆಸರಲ್ಲಿ ರೈತರ ಭೂಮಿ ಕಬಳಿಕೆಗೆ ಹುನ್ನಾರ ನಡೆಯುತ್ತಿದ್ದು,ಅತಿರೇಕದ ವರ್ತನೆಯಿಂದ ದೀಪಾವಳಿ ಸಂದರ್ಭದಲ್ಲಿ ಸಂತೋಷದಲ್ಲಿರಬೇಕಾದ ರೈತರನ್ನು ಕತ್ತಲೆಗೆ ತಳ್ಳಿದೆ. ಈ ನಿಟ್ಟಿನಲ್ಲಿ ಜ.4 ರಂದು ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪುತ್ತೂರಿನಲ್ಲಿ ದರ್ಬೆ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೇ ಭ್ರಷ್ಟಾಚಾರ, ಖಜಾನೆಯನ್ನು ಕೊಳ್ಳೆ ಹೊಡೆಯುವ ಕೆಲಸ ನಡೆಯುತ್ತಿದ್ದು, ಈ ಮೂಲಕ ಕರ್ನಾಟಕ ಭ್ರಷ್ಟಾಚಾರ ಆಡಳಿತದಲ್ಲಿ ನಂ.1 ಆಗಿದೆ ಎಂದು ತಿಳಿಸಿದರು.
ಭ್ರಷ್ಟಾಚಾರ ನಡೆಸುವುದು ಒಂದೆ ಕಡೆಯಾದರೆ ಇದೀಗ ಮತ್ತೊಂದೆಡೆ ವಕ್ಫ್ ಆಸ್ತಿಯ ಹೆಸರಲ್ಲಿ ರೈತರ ಭೂಮಿ ಕಬಳಿಕೆ ನಡೆಯುತ್ತಿದೆ. ಈ ಕುರಿತು ಸಚಿವ ಜಮೀರ್ ಅಹಮ್ಮದ್ ಮುಖ್ಯಮಂತ್ರಿಗಳ ಸೂಚನೆಯಂತೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಾರೆ. ಓರ್ವ ಮುಖ್ಯಮಂತ್ರಿ ಜತೆ ಮಂತ್ರಿಯೇ ಈ ರೀತಿ ಆದೇಶಗಳನ್ನು ಹೊರಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಮುಸ್ಲಿಂರು ಯಾರೂ ಈ ರೀತಿ ಮಾಡಿ ಎಂದು ಹೇಳಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ದುಂಬಾಲು ಬಿದ್ದು ಈ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕವಾಗಿ ಸರಕಾರದ ವತಿಯಿಂದಲೇ ಈ ವಕ್ಪ್ ವಿಚಾರ ಆದೇಶ ಬಂದಿದೆ. ತಕ್ಷಣ ಕಲಂ 11 ರಲ್ಲಿ ವಕ್ಫ್ ಆಸ್ತಿ ಹೆಸರನ್ನು ಹಿಂತೆಗೆಯಬೇಕು ಎಂದು ಅವರು ಆಗ್ರಹಿಸಿದರು.
ಸರಕಾರದ ಮಂತ್ರಿಯೇ ಈ ರೀತಿ ಮಾಡಿ ಬಹುಸಂಖ್ಯಾತರನ್ನು ತುಳಿತಕ್ಕೊಳಗಾಗಿಸಿದ್ದಾರೆ. ಮತದ ಹಿಂದೆ ಸರಕಾರ ಇದೆ ಎಂಬುದೇ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ರೈತರ ಪರವಾಗಿ ಅವರ ಅಸ್ತಿತ್ವಕ್ಕಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದರು.
ಜ.4 ರಂದು ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಉಪಸ್ಥಿತರಿದ್ದರು.