ತುಳು ಭಾಷೆಗೆ ಇನ್ನೊಂದು ಗರಿ : ತುಳು ವಿಕ್ಷನರಿ, ತುಳು ವಿಕಿಸೋರ್ಸ್‌ ಲೈವ್‌

ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವಂತೆ ಡಿಜಿಟಲ್‌ ಆವಿಷ್ಕಾರ

ಮಂಗಳೂರು: ತುಳು ಲಿಪಿಗೆ ಯುನಿಕೋಡ್‌ ಮಾನ್ಯತೆ ಸಿಕ್ಕಿದ ಬೆನ್ನಿಗೆ ಈಗ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್‌ ಲೈವ್‌ ಆಗಿದೆ. ತುಳು ಭಾಷೆಯ ಬೆಳವಣಿಗೆಯ ಉದ್ದೇಶದಿಂದ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ.

ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟು ತುಳು ವಿಕ್ಷನರಿ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು. ಈ ವಿಕ್ಷನರಿ ಕರಾವಳಿ ವಿಕಿಮೀಡಿಯನ್ನರು ಮತ್ತು ತುಳು ವಿಕಿಮೀಡಿಯನ್ನರ ಆರು ವರ್ಷಗಳ ಸ್ವಯಂಪ್ರೇರಿತ ಸಂಪಾದನೆಯ ಪ್ರಯತ್ನದ ಫಲವಾಗಿದೆ.































 
 

ಈ ಯೋಜನೆಗೆ 2018ರಲ್ಲಿ ಮುನ್ನುಡಿ ಹಾಡಿದವರು ಡಾ. ಯು.ಬಿ. ಪವನಜ. ಅತ್ಯಂತ ಹೆಚ್ಚು ಪದಗಳನ್ನು ಸಂಪಾದಿಸಿ ಕೊಡುಗೆ ನೀಡಿರುವವರು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪಿನ ಸದಸ್ಯರಾದ ಡಾ. ವಿಶ್ವನಾಥ ಬದಿಕಾನ, ದಿವಂಗತ ರವೀಂದ್ರ ಮುಂಡ್ಕೂರು, ಭರತೇಶ ಅಲಸಂಡೆಮಜಲು, ಡಾ. ಕಿಶೋರ್ ಕುಮಾರ್ ರೈ ಶೇಣಿ, ಮತ್ತು ಯಕ್ಷಿತ ಮೂಡುಕೋಣಾಜೆ. ತಾಂತ್ರಿಕ ವಿಚಾರಗಳಲ್ಲಿ ಆನೂಪ್‌ ರಾವ್‌ ಕಾರ್ಕಳ, ಚಿದಾನಂದ ಕಂಪ, ಭರತೇಶ ಅಲಸಂಡೆಮಜಲು ಸಹಕರಿಸಿದ್ದರು.

ಆಗಸ್ಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಪ್ರಾರಂಭವಾದ ಸಂದರ್ಭದಲ್ಲಿ ತುಳು ವಿಕ್ಷನರಿಯ ಕೆಲಸವೂ ಪ್ರಾರಂಭವಾಯಿತು. ಇದು ಜಾಗತಿಕ ಮಟ್ಟದಲ್ಲಿ ತುಳುಭಾಷೆಯನ್ನು ಗುರುತಿಸಲು ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ತುಳು ಭಾಷಾಭಿಮಾನಿಗಳು ಮತ್ತು ವಿದ್ವಾಂಸರುಗಳ ಸಹಯೋಗದಿಂದ ಈ ತುಳು ಶಬ್ದಕೋಶವನ್ನು ವಿಸ್ತರಿಸಲು ಮತ್ತು ಪರಿಷ್ಕರಿಸಲು ಡಿಜಿಟಲ್ ಮಾಧ್ಯಮದಲ್ಲಿ ಸಾಧ್ಯವಿದೆ.
ವಿಕ್ಷನರಿ ಒಂದು ಉಚಿತ, ಬಹುಭಾಷಾ ಆನ್‌ಲೈನ್ ನಿಘಂಟಾಗಿದ್ದು, ವ್ಯಾಖ್ಯಾನಗಳು, ವ್ಯುತ್ಪತ್ತಿಗಳು, ಉಚ್ಚಾರಣೆ, ಚಿತ್ರ, ಅನುವಾದಗಳು, ಗಾದೆ, ಒಗಟು, ನುಡಿಗಟ್ಟು ಮತ್ತು ಇನ್ನಿತರ ವಿಚಾರಗಳನ್ನು ಸೇರಿಸಿಕೊಳ್ಳಬಹುದು. ಸಾಂಪ್ರದಾಯಿಕ ನಿಘಂಟುಗಳಿಗಿಂತ ಭಿನ್ನವಾಗಿ ಇದು ಪ್ರಪಂಚದಾದ್ಯಂತ ಇರುವ ತುಳುವರ ಕೊಡುಗೆಯಿಂದ ಸಂಪಾದಿಸಲ್ಪಡುತ್ತದೆ.

ತುಳು ವಿಕ್ಷನರಿಯಲ್ಲಿ 3000ಕ್ಕೂ ಅಧಿಕ ಶಬ್ದಗಳಿದ್ದು ವ್ಯವಸ್ಥಿತವಾಗಿ ವ್ಯಾಕರಣ ನೆಲೆಯಲ್ಲಿ ವರ್ಗೀಕರಿಸಲಾಗಿದೆ. ಇದು ತುಳು ಭಾಷೆಯ ಪದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಪದ, ಸಮಾನಾರ್ಥಗಳು, ಸಾಹಿತ್ಯ, ಪಾಡ್ದನ ಇತ್ಯಾದಿ ಬಳಕೆಯ ಉದಾಹರಣೆಗಳು, ಪದದ ಮೂಲಗಳು, ಇತರ ಭಾಷೆಯ ಸಮಾನಾರ್ಥಗಳು ಮತ್ತು ಅವುಗಳಿಗೆ ಲಿಂಕ್ ಮತ್ತು ವ್ಯಾಕರಣ ವಿವರಗಳು ಇತ್ಯಾದಿ ಭಾಷಾ ಕಲಿಕೆಗೆ, ಭಾಷಾಶಾಸ್ತ್ರಜ್ಞರಿಗೆ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಸಹಾಯವಾಗುವುದು.

ತುಳು ವಿಕಿಸೋರ್ಸ್‌

ತುಳು ವಿಕ್ಷನರಿಯ ಜೊತೆಗೆ ತುಳು ವಿಕಿಸೋರ್ಸ್ ಕೂಡ ಪ್ರಾರಂಭವಾಗಿದೆ. ವಿಕಿಸೋರ್ಸ್ ಉಚಿತ ಆನ್‌ಲೈನ್ ಡಿಜಿಟಲ್ ಲೈಬ್ರರಿಯಾಗಿದೆ, ಸಾರ್ವಜನಿಕ ಡೊಮೈನ್‌ನಲ್ಲಿ ಅಥವಾ ಮುಕ್ತ ಹಕ್ಕುಸ್ವಾಮ್ಯದ ಅಡಿಯಲ್ಲಿ ಮೂಲ ಪಠ್ಯಗಳನ್ನು ಹೊಂದಿದ್ದು, ಓದುಗರು, ಪುಸ್ತಕ ಬಳಕೆದಾರರು ವಿಷಯದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ವಿಕಿಸೋರ್ಸ್‌ ಸಹಕಾರಿಯಾಗಿದೆ.

ಪುಸ್ತಕವನ್ನು ಲಿಪ್ಯಂತರ ಮತ್ತು ಪ್ರೂಫ್ ರೀಡಿಂಗ್ ಓದುವ ಅನುಕೂಲವನ್ನು ಸಂಪಾದಕರು ಮಾಡಿಕೊಡುವರು. ಹೀಗೆ ಸಂಪಾದನೆಯಾದ ಪುಸ್ತಕವನ್ನು ಓದಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು. ತುಳು ವಿಕಿಸೋರ್ಸ್ ಪುಸ್ತಕಗಳು, ಪತ್ರಗಳು, ಐತಿಹಾಸಿಕ ಪಠ್ಯಗಳು ಮತ್ತು ಸಾಹಿತ್ಯ ಕೃತಿಗಳಂತಹ ಮೂಲ ತುಳು ದಾಖಲೆಗಳನ್ನು ಸಂರಕ್ಷಿಸಲು ಗಮನಹರಿಸುತ್ತದೆ. ಇದು ಸಂಶೋಧಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ತುಳು ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರಿಗೆ ವಿಶೇಷವಾಗಿ ಉಪಯುಕ್ತವಾಗಿದೆ.

ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್‌ ಇವುಗಳ ಪ್ರಾರಂಭವು ಜಾಗತಿಕ ವೇದಿಕೆಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ. ಭವಿಷ್ಯದ ಪೀಳಿಗೆಯು ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಲಿಯಲು ಮತ್ತು ತೊಡಗಿಸಿಕೊಳ್ಳಲು ಒಂದು ಉತ್ತಮ ಬುನಾದಿಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top