ಆರದಿರಲಿ ನಮ್ಮೊಳಗಿನ ಅರಿವಿನ ದೀಪ…

ದೀಪಾವಳಿ ಹಬ್ಬದ ಸಂಭ್ರಮಕ್ಕೆ ವಿಶೇಷ ಲೇಖನ

ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ಗೆಲುವನ್ನು ಸಂಕೇತಿಸುವ ಹಬ್ಬ ದೀಪಾವಳಿ. ಈ ದಿನದಲ್ಲಿ ಯಾರು ಸಂಪತ್ತನ್ನು ಬಯಸುತ್ತಾರೋ ಅವರ ಬಳಿ ಲಕ್ಷ್ಮಿ ಬರುತ್ತಾಳೆ, ಯಾರು ಆರೋಗ್ಯವನ್ನು ಬಯಸುತ್ತಾರೋ ಅವರ ಬಳಿ ಶಕ್ತಿ ಬರುತ್ತಾಳೆ ಮತ್ತು ಯಾರು ಜ್ಞಾನವನ್ನು ಬಯಸುತ್ತಾರೋ ಅವರ ಬಳಿ ಸರಸ್ವತಿ ಬರುತ್ತಾಳೆ ಎಂದು ಹೇಳಲಾಗುತ್ತದೆ.

ದೀಪಾವಳಿ ದೇಶದ ಬಹುದೊಟ್ಟ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಪ್ರತಿ ರಾಜ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ನಡೆದೇ ನಡೆಯುತ್ತದೆ. ಈಗ ದೀಪಾವಳಿ ದೇಶದ ಗಡಿಯನ್ನು ದಾಟಿ ಅಮೆರಿಕ, ಕೆನಡ, ದುಬೈ ಸೇರಿ ಅನೇಕಾನೇಕ ದೇಶಗಳಲ್ಲೂ ಆಚರಣೆಯಾಗುತ್ತಿರುವುದು ನಮ್ಮ ದೇಶದ ಸಿರಿವಂತ ಸಾಂಸ್ಕೃತಿಕ ಪರಂಪರೆಯ ಸೀಮೋಲ್ಲಂಘನೆಯೇ ಸರಿ.
ಜಗತ್ತಿಗೆ ತೀರಾ ಅಗತ್ಯವಾಗಿರುವ ಬೆಳಕಿನ ಆರಾಧನೆಯೇ ದೀಪಾವಳಿ. ಜಗತ್ತಿನಲ್ಲಿರುವ ಸಕಲ ಜೀವರಾಶಿಗೂ ಬೆಳಕು ತೀರಾ ಅಗತ್ಯ. ಈ ಹಿನ್ನೆಲೆಯಲ್ಲಿ ಬೆಳಕನ್ನು ಆರಾಧಿಸುವ ಪರಂಪರೆಯನ್ನು ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿದ್ದರು. ದೀಪಾವಳಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಗಳು ಕೂಡ ಇವೆ. ಜನರ ಧಾರ್ಮಿಕ ನಂಬಿಕೆಗಳಿಗೂ ಅವರು ಆಚರಿಸುವ ಹಬ್ಬಗಳಿಗೂ ನೇರ ಸಂಬಂಧವಿದೆ.
ದೀಪಾವಳಿಯನ್ನು ವಿವಿಧ ಸಾಂಸ್ಕೃತಿಕ ಕಾರಣಗಳಿಗಾಗಿಯೂ ಆಚರಿಸಲಾಗುತ್ತದೆ.































 
 

ಶ್ರೀಕೃಷ್ಣ ನರಕಾಸುರನನ್ನು ವಧಿಸಿದ್ದು, ರಾವಣ ಸಂಹಾರದ ಬಳಿಕ ಶ್ರೀ ರಾಮ ಸೀತಾ ಸಮೇತನಾಗಿ ಮತ್ತೆ ಅಯೋಧ್ಯೆ ಪ್ರವೇಶಿಸಿದ್ದು, ಅಸಾಮಾನ್ಯ ಶೂರನಾದರೂ ಅತಿಯಾಸೆಗೆ ಬಲಿಯಾದ ಬಲಿ ಚಕ್ರವರ್ತಿಯನ್ನು ವಾಮನ ಮೂರ್ತಿ ಪಾತಾಳಕ್ಕೆ ತುಳಿದದ್ದು, ಸಮುದ್ರ ಮಥನ ಕಾಲದಲ್ಲಿ ಲಕ್ಷ್ಮೀದೇವಿಯ ಜನನವಾಗಿದ್ದು, ಇಂದ್ರನ ಕ್ರೋಧ ರೂಪವಾದ ಮಳೆಯಿಂದ ಗೋವುಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದದ್ದು… ಎಲ್ಲವೂ ದೀಪಾವಳಿಯ ಜತೆಗೆ ಬೆಸೆದುಕೊಂಡ ಪೌರಾಣಿಕ ಕಥನಗಳು. ಎಲ್ಲ ಕಥೆಗಳ ಆಳದಲ್ಲಿರುವುದು ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯ ಸಂದೇಶ. ಐತಿಹಾಸಿಕವಾಗಿ ಭಗವಾನ್‌ ಮಹಾವೀರ ನಿರ್ವಾಣ ಹೊಂದಿದ್ದೂ ಇದೇ ಕಾಲದಲ್ಲಿ.
ದೀಪಾವಳಿ ದೀಪಗಳ ಹಬ್ಬ. ಪ್ರತಿ ಪಟ್ಟಣ, ನಗರ ಹಾಗೂ ಹಳ್ಳಿಯಲ್ಲಿ ಎಲ್ಲೆಡೆ ಸಾವಿರ ಸಾವಿರ ಹಣತೆಗಳು ಬೆಳಗುವುದು ಜನರು ತಮ್ಮ ಬದುಕಿನ ಅಂಧಕಾರ ಕಳೆದು ಹೊಸ ಬೆಳಕು ಮೂಡಲಿ ಎಂದು ಹಾರೈಸುವುದರ ಶುಭ ಸಂಕೇತ. ಆದರೆ ಇದು ಕೇವಲ ಬಾಹ್ಯದ ದೀಪಗಳನ್ನು ಬೆಳಗುವುದಷ್ಟೇ ಅಲ್ಲ, ಆಂತರಿಕ ಬೆಳಕನ್ನೂ ಎಲ್ಲರೂ ಬೆಳಗಿಸಬೇಕಾಗಿದೆ.

ಬೆಳಕು ಎಂದರೆ ಸ್ಪಷ್ಟತೆ. ಸ್ಪಷ್ಟತೆಯಿಲ್ಲದೆ ನೀವು ಹೊಂದಿರುವ ಎಲ್ಲ ಗುಣವೂ ಹಾನಿಕಾರಕವಾಗುತ್ತದೆಯೇ ವಿನಹ ಅವು ಉಡುಗೊರೆಯಾಗುವುದಿಲ್ಲ. ನಿಮ್ಮಲ್ಲಿ ಸ್ಪಷ್ಟತೆಯಿಲ್ಲದ ಆತ್ಮವಿಶ್ವಾಸವು ವಿಪತ್ತನ್ನಷ್ಟೇ ಒಡ್ಡಬಲ್ಲದು ಮತ್ತು ಈ ದಿನ ಜಗತ್ತಿನಲ್ಲಿ ಬಹಪಾಲು ಚಟುವಟಿಗಳು ಯಾವುದೇ ಸ್ಪಷ್ಟತೆಯಿಲ್ಲದೆ ನಡೆಸಲಾಗುತ್ತದೆ ಎಂದು ವಿವರಿಸುತ್ತಾರೆ ಸದ್ಗುರು ಜಗ್ಗಿ ವಾಸುದೇವ.

ನಾವು ಸುಮ್ಮನೆ ಕುಳಿತಿದ್ದರೂ, ನಮ್ಮ ಪ್ರಾಣ ಶಕ್ತಿ, ಹೃದಯ, ಮನಸ್ಸು ಮತ್ತು ದೇಹ ಜೀವಂತ ಪಟಾಕಿಯಂತೆ ತೀವ್ರವಾಗಿರಬೇಕು, ಒದ್ದೆಯಾದ ಪಟಾಕಿಯಂತೆ ನೀವಿದ್ದರೆ, ಹೊರಗಿನ ಪಟಾಕಿಯ ಅಗತ್ಯ ಬೀಳುತ್ತದೆ. ಸ್ಪಷ್ಟತೆಯಲ್ಲದೆ ಯಾವುದೇ ಕೆಲಸವನ್ನು ಮಾಡಿದರೂ ಅದು ಅನಾಹುತಕ್ಕೆ ಕಾರಣವಾಗುತ್ತದೆ. ಬೆಳಕು ನಿಮ್ಮ ದೃಷ್ಟಿಗೆ ಸ್ಪಷ್ಟತೆಯನ್ನು ತರುತ್ತದೆ, ಇದು ಕೇವಲ ಭೌತಿಕ ಅರ್ಥದಲ್ಲಷ್ಟೇ ಅಲ್ಲ. ನಮ್ಮ ಜೀವನವನ್ನು ನಾವು ಎಷ್ಟು ವಿವೇಚನಾಯುಕ್ತವಾಗಿ ನಡೆಸುತ್ತೇವೆ ಎಂಬುದು ಜೀವನವನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ನಿಮ್ಮ ಸುತ್ತಲಿನ ಎಲ್ಲವನ್ನೂ ಎಷ್ಟರ ಮಟ್ಟಿಗೆ ಗ್ರಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದೀಪಾವಳಿ ಎಂದರೆ ಕರಾಳ ಶಕ್ತಿಗಳನ್ನು ನಾಶಮಾಡಿ ಬೆಳಕನ್ನು ತಂದ ದಿನ. ಇಂತಹ ಕರಾಳ ಶಕ್ತಿಗಳಲ್ಲಿ ಮಾನವ ಜೀವನದ ಸಂಕಟವೂ ಒಂದಾಗಿದೆ. ಕಾರ್ಮೋಡಗಳು ತಾವೇ ಸೂರ್ಯನನ್ನು ಅಡ್ಡಹಾಕಿರುವುದನ್ನು ಅರಿತುಕೊಳ್ಳದೆ, ಕತ್ತಲೆಯ ವಾತಾವರಣದಲ್ಲಿ ಸಂಚರಿಸುವಂತೆ ಮನುಷ್ಯರು ಕೂಡ ತಮ್ಮೊಳಗಿರುವ ಬೆಳಕನ್ನು ಅರಿತುಕೊಳ್ಳದೆ ಅಂಧಕಾರದಲ್ಲಿ ತಡಕಾಡುತ್ತಿರುತ್ತಾರೆ. ನಾವು ಬೇರೆಡೆಯಿಂದ ಯಾವುದೇ ಬೆಳಕನ್ನು ತರಬೇಕಾಗಿಲ್ಲ. ಬದಲಾಗಿ ನಮ್ಮೊಳಗೆ ಸಂಗ್ರಹಿಸಿಟ್ಟರುವ ಕಾರ್ಮೋಡಗಳನ್ನು ಹೊರಹಾಕಿದರೆ, ಬೆಳಕು ತಾನಾಗಿಯೇ ಸಂಭವಿಸುತ್ತದೆ. ದೀಪಗಳಿಂದ ತುಂಬಿರುವ ಈ ಹಬ್ಬವು ಇದರ ನೆನಪಾಗಿದೆ ಎನ್ನುವುದು ದೀಪಾವಳಿ ಕುರಿತು ಸದ್ಗುರುಗಳು ಹೇಳುವ ಮಾತು.

ದೀಪಾವಳಿಯ ಉದ್ದೇಶವೆ ಸಂಭ್ರಮದ ಅಂಶವನ್ನು ನಮ್ಮ ಜೀವನದಲ್ಲಿ ತರುವುದಾಗಿದೆ. ಅದಕ್ಕಾಗಿಯೇ ಪಟಾಕಿ ಸಿಡಿಸುವ ಮೂಲಕ ನಮ್ಮೊಳಗಿನ ಕಿಚ್ಚನ್ನು ಹೆಚ್ಚಿಸಿಕೊಳ್ಳುವುದು. ಆದ್ದರಿಂದ ಈ ಹಬ್ಬದ ಉದ್ದೇಶ ಕೇವಲ ಒಂದೋ ಎರಡೋ ದಿನದ ಸಂಭ್ರಮ, ಸಡಗರವಲ್ಲ. ಇಡೀ ವರ್ಷ ನಮ್ಮ ಬದುಕು ಸಕಲ ಸಮೃದ್ಧಿಯಿಂದ ಕೂಡಿರಲಿ, ಕೆಡುಕಿನ ಮೇಲೆ ಒಳಿತು ಸದಾ ಗೆಲ್ಲುತ್ತಿರಲಿ ಎಂಬ ಉದಾತ್ತ ಆಶಯ. ನಮ್ಮೊಳಗಿನ ಅರಿವಿನ ದೀಪ ಎಂದೆಂದಿಗೂ ಬೆಳಗುತ್ತಲೇ ಇರಲಿ ಎಂಬ ಹಾರೈಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top