ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ

ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗೆ ಅವಕಾಶ

ಬೆಂಗಳೂರು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಅಭಿಯಾನ ಪ್ರಾರಂಭವಾಗಿದೆ. ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಸಲು ಅ.29ರಿಂದ ನವೆಂಬರ್‌ 24ರ ವರೆಗೆ ಅವಕಾಶ ಇರಲಿದೆ. ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗಳಿಗೆ ನವೆಂಬರ್‌ 9-10 ಹಾಗೂ 23-24 (ಶನಿವಾರ-ರವಿವಾರ) ವಿಶೇಷ ದಿನಾಂಕ ಇರಲಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್‌ 24ಕ್ಕೆ ವಿಲೇವಾರಿ ಮಾಡಲಾಗುತ್ತದೆ. 2025ರ ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ































 
 

ನಮೂನೆ-6: ಹೊಸ ಮತದಾರರ ಸೇರ್ಪಡೆಗೆ ಅರ್ಜಿ
ನಮೂನೆ 6ಎ: ಸಾಗರೋತ್ತರ ಭಾರತೀಯ ಮತದಾರರಿಂದ ಹೆಸರು ಸೇರ್ಪಡೆಗೆ ಅರ್ಜಿ
ನಮೂನೆ 7: ಹೆಸರು ಸೇರಿಸಲು/ಅಳಿಸಲು ಅರ್ಜಿ ಸಲ್ಲಿಸಲು
ನಮೂನೆ 8: ವಾಸಸ್ಥಳ ಬದಲಾವಣೆ, ತಿದ್ದುಪಡಿ ಇತ್ಯಾದಿಗೆ ಅರ್ಜಿ

5.44 ಕೋಟಿ ಮತದಾರರು

ರಾಜ್ಯ ಚುನಾವಣಾ ಆಯೋಗ ನಿನ್ನೆ ಪ್ರಕಟಿಸದ ಮತದಾರರ ಕರಡು ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಸದ್ಯ 5.44 ಕೋಟಿ ಅರ್ಹ ಮತದಾರರಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 221 ಕ್ಷೇತ್ರಗಳ 2025ರ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಒಟ್ಟು 5.44 ಕೋಟಿ ಮತದಾರರು ಇದ್ದಾರೆ. ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿಲ್ಲ.

ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್‌ಸೈಟ್‌ ಹಾಗೂ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024ರ ಅಂತಿಮ ಮತದಾರರ ಪಟ್ಟಿಯಿಂದ 2025ರ ಕರಡುಪಟ್ಟಿವರೆಗೆ ವಿವಿಧ ಕಾರಣಗಳಿಗೆ ಒಟ್ಟು 3.60 ಲಕ್ಷ ಹೆಸರಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ (ಅಳಿಸಲಾಗಿದೆ). ಇದರಲ್ಲಿ 1 ಲಕ್ಷಕ್ಕೂ ಅಧಿಕ ಮರಣ ಪ್ರಕರಣಗಳಿದ್ದರೆ, 21,370 ಸಾವಿರ ಗೈರು, 32,950 ಎರಡು ಬಾರಿ ನೋಂದಣಿ, 2.04 ಲಕ್ಷ ಶಾಶ್ವತ ಸ್ಥಳಾಂತರ ಹಾಗೂ 1 ಸಾವಿರ ಇತರ ಕಾರಣಗಳ ಪ್ರಕರಣಗಳಿವೆ. ನಿಗದಿತ ಅರ್ಜಿ ನಮೂನೆ 7 ಸ್ವೀಕರಿಸಿ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಮಹಿಳಾ ಮತದಾರರ ಸಂಖ್ಯೆ ಗಣನೀಯ ಹೆಚ್ಚಳ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವ ಸುಳಿವು ದೊರೆತಿದೆ. ಉಪಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರವನ್ನು ಕರಡು ಪಟ್ಟಿ ಒಳಗೊಳ್ಳದೆ ಇರುವುದರಿಂದ ಮಹಿಳಾ ಮತದಾರರೇ ಹೆಚ್ಚು ಎಂದು ಅಧಿಕೃತವಾಗಿ ಹೇಳಲಾಗದು. ಆದರೆ, ಅಂಕಿಅಂಶಗಳಿಂದಾಗಿ ಮಹಿಳಾ ಮತದಾರರೇ ಹೆಚ್ಚಿರುವ ನಿರೀಕ್ಷೆ ದಟ್ಟವಾಗಿದೆ.
221 ವಿಧಾನಸಭಾ ಕ್ಷೇತ್ರಗಳ ಕರಡು ಪಟ್ಟಿಯ ಪ್ರಕಾರ ಸದ್ಯ 2.72 ಕೋಟಿ ಮಹಿಳಾ ಮತದಾರರಿದ್ದರೆ, 2.71 ಕೋಟಿ ಪುರುಷ ಮತದಾರರಿದ್ದಾರೆ. 5,022 ತೃತೀಯ ಲಿಂಗಿ ಮತದಾರರಿದ್ದಾರೆ.
ಬಾಕಿಯಿರುವ ಆ ಮೂರು ಕ್ಷೇತ್ರಗಳ ಅಂಕಿಅಂಶಗಳನ್ನು ಸೇರಿಸಿದರೂ ಪುರುಷರಿಗಿಂತ 36,462 ಮಹಿಳಾ ಮತದಾರರು ಹೆಚ್ಚಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಕರಾವಳಿ ಪ್ರದೇಶದಲ್ಲಷ್ಟೇ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಾಗಿತ್ತು. ಆದರೆ, ಇದೀಗ ರಾಜ್ಯದಲ್ಲೇ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಈ ಅಂಕಿಅಂಶ ಚುನಾವಣೆಗಳಲ್ಲಿ ಮಹತ್ವ ಪಡೆಯಬಹದು. ವಿವಿಧ ಪಕ್ಷಗಳ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸಬಹುದು ಮತ್ತು ಅವರ ಕಾರ್ಯತಂತ್ರವನ್ನು ಮರುರೂಪಿಸಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top