ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೊನ್ನೆಯಿಂದ ಪ್ರಾರಂಭಿಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಬರೋಬ್ಬರಿ 35 ತಾಸು ನಿರಂತರವಾಗಿ ನಡೆದಿದೆ. ಇ.ಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ದಾಳಿ ಮಾಡಿ ದಾಖಲೆಪತ್ರ ಮತ್ತಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಕೇಶ್ ಪಾಪಣ್ಣ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳ ಬೇನಾಮಿ ಇರಬಹುದು ಹಾಗೂ ಮುಡಾದ ಹಲವು ವ್ಯವಹಾರಗಳಲ್ಲಿ ರಾಕೇಶ್ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 2 ದಿನಗಳ ಕಾಲ 5 ಅಧಿಕಾಗಳಿಂದ ಸತತ 35 ಗಂಟೆಗಳ ತನಿಖೆ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಇ.ಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದೆ. ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿದ್ದರಾಮಯ್ಯನವರ ಪತ್ನಿಗೆ ಸೈಟ್ ಹಂಚಿಕೆಯಾಗಿದ್ದರ ಬಗ್ಗೆ ಪ್ರಶ್ನಿಸಿದೆ. ಇ.ಡಿ ತನಿಖೆಗೆ ಮಾಜಿ ಆಯುಕ್ತ ನಟೇಶ್ ಸಹಕರಿಸದೆ ನಾನು ಪ್ರಕರಣದಲ್ಲಿ ತಪ್ಪು ಮಾಡಿಲ್ಲ, ಸರಕಾರದ ಆದೇಶ ಪಾಲನೆ ಮಾಡಿದ್ದೇನೆ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ ಎಂದು ವಾದಿಸಿ ಮೊಂಡಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಂಜೆವರೆಗೂ ನಟೇಶ್ ಮನೆಯಲ್ಲಿ ಶೋಧ ಮಾಡಿದ ಅಧಿಕಾರಿಗಳು ಎರಡು ಬ್ಯಾಗ್ ತುಂಬ ದಾಖಲೆಗಳನ್ನ ಕೊಂಡೊಯ್ದರು. ತನಿಖೆಗೆ ಸಹಕರಿಸದ ಕಾರಣ ನಟೇಶ್‌ನನ್ನು ಅಧಿಕಾರಿಗಳು ವಶಕ್ಕೆ ಪಡೆದು ನಂತರ ಶಾಂತಿನಗರದ ಇ.ಡಿ ಕಚೇರಿಗೆ ವಿಚಾರಣೆ ಮಾಡಿ ಕಳುಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿಂತೆ ಮುಂದಿನ ವಾರ ವಿಚಾರಣೆಗೆ ಹಾಜರಾಗಲು ರಾಕೇಶ್ ಪಾಪಣ್ಣಗೆ ಇ.ಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಬಗ್ಗೆ ಕೂಡ ಇ.ಡಿ ತನಿಖೆ ನಡೆಸಿದೆ.