ಸರಕಾರ ನಮಗೆ ದೀಪಾವಳಿಯ ಕರಾಳ ಉಡುಗೊರೆ ಕೊಟ್ಟಿದೆ ಎಂದು ಆಕ್ರೋಶ
ವಿಜಯಪುರ: ಎಲ್ಲೆಡೆ ಜನರು ದೀಪಾವಳಿ ಸಂಭ್ರಮಕ್ಕೆ ಅಣಿಯಾಗುತ್ತಿದ್ದರೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಮಾತ್ರ ವಕ್ಫ್ ದೆಸೆಯಿಂದಾಗಿ ತಮ್ಮ ಕೃಷಿ ಜಮೀನು ಉಳಿಸಿಕೊಳ್ಳಲು ಹಬ್ಬ ಬಿಟ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ರೈತರ ಪಾಲಿಗೆ ಈ ವರ್ಷದ ದೀಪಾವಳಿ ಕರಾಳವಾಗುವ ಲಕ್ಷಣ ಕಾಣಿಸಿದೆ. ತಮ್ಮ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತರು ಅಹೋರಾತ್ರಿ ಹೋರಾಟ ಪ್ರಾರಂಭಿಸಿದ್ದಾರೆ. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಠಿಕಾಣಿ ಹೂಡಿರುವ ರೈತರು ರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತ ಸಂಘಟನೆಗಳು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಗರದ ಗಾಂಧಿ ಚೌಕ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿವೆ. ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಸಚಿವ ಜಮೀರ ಅಹ್ಮದ್ ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಅಲ್ಲಿಯೇ ಮಲಗಿ ಅಹೋರಾತ್ರಿ ಅನಿರ್ದಿಷ್ಟ ಹೋರಾಟ ಪ್ರಾರಂಭಿಸಿದ್ದಾರೆ.
ರಾಜ್ಯ ಸರ್ಕಾರ ಯಾವುದೋ ಒಂದು ಆದೇಶ ಪ್ರತಿ ತೋರಿಸಿ ನಮ್ಮನ್ನ ಯಾಮಾರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೂ ರೈತರ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಈ ಹೋರಾಟಕ್ಕೆ ಜಗ್ಗದಿದ್ದರೆ ಶವಸಂಸ್ಕಾರ, ತಿಥಿ ಕಾರ್ಯಕ್ರಮ, ಕತ್ತೆ ಚಳವಳಿ, ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅನ್ನದಾತರ ಪಾಲಿಗೆ ಈ ಬಾರಿ ರಾಜ್ಯ ಸರ್ಕಾರ ಕರಾಳ ದೀಪಾವಳಿಯನ್ನು ಉಡುಗೊರೆಯಾಗಿ ನೀಡಿದೆ. ಇದು ಅನ್ನದಾತರ ಹೋರಾಟ, ಇದಕ್ಕೆ ಯಾರೇ ಬೆಂಬಲ ನೀಡಿದರೂ ಸ್ವಾಗತಿಸುತ್ತೇವೆ ಎಂದು ರೈತರು ಹೇಳಿದ್ದಾರೆ.
ಹೋರಾಟ ಕೈಬಿಡುವಂತೆ ಮನವೊಲಿಸಲು ರಾತ್ರೋರಾತ್ರಿ ಎಡಿಸಿ ಸೋಮಲಿಂಗ ಗೆಣ್ಣೂರ ಬಂದು ರೈತರಿಗೆ ಎಸಿ ಆದೇಶ ತೋರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೇರಿದಂತೆ ಪೊಲೀಸ್ ಸಿಬ್ಬಂದಿ ರೈತರಿಗೆ ಹೋರಾಟ ಕೈಬಿಡಲು ಒತ್ತಾಯಿಸಿದರು. ಆದರೆ ರೈತರು ಇದ್ಯಾವುದಕ್ಕೂ ಒಪ್ಪಲಿಲ್ಲ. ಡಿಸಿ ಕಚೇರಿ ಎದುರು ಸ್ಥಳ ಖಾಲಿ ಮಾಡಿ ನಿಮಗೆ ಬೇರೆ ಜಾಗ ಕೊಡುತ್ತೇವೆ ಅಲ್ಲಿ ಹೋರಾಟ ಮುಂದುವರಿಸಿ ಎಂದು ತಿಳಿಸಿದರು. ಪೊಲೀಸ್ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಕಲಬುರಗಿಯಲ್ಲೂ ರೈತರಿಗೆ, ಮಠಕ್ಕೆ ನೋಟಿಸ್
ವಕ್ಫ್ ಬೋರ್ಡ್ ಆಸ್ತಿ ವಿಚಾರ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬರಗೂ ವ್ಯಾಪಿಸಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿದೆ. 45ಕ್ಕೂ ಹೆಚ್ಚು ರೈತರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ ಎನ್ನಲಾಗಿದೆ.
ಚಿಂಚೋಳಿ ಪಟ್ಟಣದ ಮಹಾಂತೇಶ್ವರ ಮಠಕ್ಕೂ ನೋಟಿಸ್ ಜಾರಿ ಮಾಡಲಾಗಿದೆ. ಮಠದ 10×7 ಜಾಗ ತಮ್ಮದೆಂದು ವಕ್ಫ್ ಬೋರ್ಡ್ ನೋಟಿಸ್ನಲ್ಲಿ ಪ್ರತಿಪಾದಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ಕೊಟ್ಟು ಜಮೀನು ಖರೀದಿ ಮಾಡಿದವರಿಗೆ ಸಂಕಷ್ಟ ಎದುರಾಗಿದೆ.
ಮೊದಲೇ ವಕ್ಫ್ ಹೆಸರು ಇದ್ದಿದ್ದರೆ ಜಮೀನು ಖರೀದಿಸುತ್ತಿರಲಿಲ್ಲ. ನಾವು ಕಷ್ಟ ಪಟ್ಟು ಜಮೀನನ್ನು ಖರೀದಿ ಮಾಡಿದ್ದೇವೆ. ಈಗ ವಕ್ಫ್ ಬೋರ್ಡ್ ಹೆಸರು ನಮ್ಮ ಪಹಣಿಯಲ್ಲಿ ಬಂದಿದೆ. ತಹಶೀಲ್ದಾರ್ ಮೇಲಿಂದ ಮೇಲೆ ನಮಗೆ ನೋಟಿಸ್ ನೀಡುತ್ತಿದ್ದಾರೆ. ಕಚೇರಿಗೆ ಬಂದರೆ ವಕ್ಫ್ ಬೋರ್ಡ್ ಅಧಿಕಾರಿಗಳು ಬಂದಿಲ್ಲ ಎನ್ನುತ್ತಾರೆ. ತಹಶೀಲ್ದಾರ್ ಕಚೇರಿಗೆ ಅಲೆದು ಸುಸ್ತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.