ಹೈದರಾಬಾದ್: ಮಗ ಮೃತಪಟ್ಟಿರುವುದು ತಿಳಿಯದೆ ಅಂಧ ವೃದ್ಧ ದಂಪತಿ ಮೃತದೇಹದ ಜೊತೆಗೆ 5 ದಿನ ಕಳೆದ ದಾರುಣ ಘಟನೆಯೊಂದು ಹೈದರಾಬಾದ್ ಬ್ಲೈಂಡ್ಸ್ ಕಾಲೋನಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.
ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ ಇಬ್ಬರೂ 60 ವರ್ಷ ಮೇಲ್ಪಟ್ಟವರು ಮತ್ತು ಇಬ್ಬರೂ ಅಂಧರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಬ್ಲೈಂಡ್ಸ್ ಕಾಲೋನಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಕ್ಕಪಕ್ಕದವರು ಅವರ ಮನೆಯಿಂದ ವಿಪರೀತ ದುರ್ವಾಸನೆ ಬರುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದಾಗ ಪ್ರಮೋದ್ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ವಿಚ್ಛೇದನದ ಬಳಿಕ ಪ್ರಮೋಡ್‌ನ ಪತ್ನಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಆತನನ್ನು ಬಿಟ್ಟುಹೋಗಿದ್ದಳು. ಪತ್ನಿ ಬಿಟ್ಟುಹೋದ ಬಳಿಕ ಪ್ರಮೋದ್ ಮದ್ಯವ್ಯಸನಿಯಾಗಿದ್ದ. ದಂಪತಿಗಳು ಆತನನ್ನು ಊಟಕ್ಕಾಗಿ ಕರೆದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರ ಧ್ವನಿ ತುಂಬಾ ದುರ್ಬಲವಾಗಿದ್ದ ಕಾರಣ ನೆರೆಹೊರೆಯವರಿಗೆ ಅವರು ಸಹಾಯಕ್ಕೆ ಮೊರೆಯಿಟ್ಟದ್ದು ಕೇಳಿಸಿರಲಿಲ್ಲ ಎನ್ನಲಾಗಿದೆ.
ನೆರೆಹೊರೆಯವರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ದಂಪತಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿರಿಯ ಮಗ ಪ್ರದೀಪ್ ಹೈದರಾಬಾದ್‌ನ ಇನ್ನೊಂದು ಕಡೆ ವಾಸಿಸುತ್ತಿದ್ದು ಅವನನ್ನು ಕರೆಸಿ ಪೊಲೀಸರು ವೃದ್ಧರ ಯೋಗಕ್ಷೇಮ ನೋಡಿಕೊಳ್ಳಲು ತಿಳಿಸಿದ್ದಾರೆ.
4-5 ದಿನಗಳ ಹಿಂದೆ ಪ್ರಮೋದ್ ನಿದ್ದೆಯಲ್ಲಿ ಮೃತಪಟ್ಟಿರುವ ಸಾಧ್ಯತೆಯಿದೆ. ಇದು ತಿಳಿಯದೆ ವೃದ್ಧ ಮಾತಾಪಿತರು ಅವನನ್ನು ಊಟ-ತಿಂಡಿಗೆ ಕರೆಯುತ್ತಿದ್ದರು. ಕೊನೆಗೆ ಅವರು ಕೂಡ ಅರೆ ಪ್ರಜ್ಞಾವಸ್ಥೆಗೆ ಜಾೃರಿದ್ದಾರೆ. ಈ ನಡುವೆ ಮೃತದೇಹ ಕೊಳೆಯಲಾರಂಭಿಸಿದ್ದು, ವಾಸನೆ ಹೊರಗೆ ಬಂದಾಗ ಗೊತ್ತಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.