ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣ ಕಳ್ಳತನ | ಕಿಟಿಕಿ ಸರಳು ಮುರಿದು ಒಳನುಗ್ಗಿದ್ದ ಕಳ್ಳರು; ಬ್ಯಾಂಕ್‌ ಒಳಗೆಲ್ಲ ಮೆಣಸಿನ ಪುಡಿ

ದಾವಣಗೆರೆ: ಜಿಲ್ಲೆಯ ನ್ಯಾಮತಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯಿಂದ ಕಳ್ಳರು ಬರೋಬ್ಬರಿ 17 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಬ್ಯಾಂಕ್‌ ಮ್ಯಾನೇಜರ್‌ ಸುನಿಲ್‌ ಕುಮಾರ್‌ ಯಾದವ್‌ ಪೊಲೀಸರಿಗೆ ದೂರು ನೀಡಿದ್ದಾರೆ. 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ನ್ಯಾಮತಿ ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಯ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಒಯ್ದಿದ್ದಾರೆ. ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಕಳ್ಳರು ಗುರುತು ಪತ್ತೆಯಾಗದಂತೆ ಮಾಡಲು ಸಿಸಿಟಿವಿಯ ಡಿವಿಆರ್ ಒಯ್ದಿದ್ದಾರೆ. ಶ್ವಾನದಳದ ಶ್ವಾನಗಳಿಗೆ ವಾಸನೆ ಗ್ರಹಿಸಲು ಸಾಧ್ಯವಾಗದಂತೆ ಬ್ಯಾಂಕ್‌ನ ಒಳಗಡೆ ಖಾರದ ಪುಡಿ ಎರಚಿದ್ದಾರೆ. ಕಳ್ಳರನ್ನು ಹಿಡಿಯಲು ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.
ಹೊನ್ನಾಳಿ- ನ್ಯಾಮತಿಯಲ್ಲಿ ಐದು ವರ್ಷಕ್ಕೊಮ್ಮೆ ಬ್ಯಾಂಕ್ ಕಳ್ಳತನವಾಗುತ್ತಿದೆ. 2014ರಲ್ಲಿ ಅರಕೆರೆ ಬಳಿಯ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. 2019ರಲ್ಲಿ ಅದೇ ಬ್ಯಾಂಕ್ ಮತ್ತೆ ಕಳ್ಳತನ ಮಾಡಿ 2 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈಗ 2024ರಲ್ಲಿ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್ ಕಳ್ಳತನ ನಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top