ನೂರಾರು ಎಕರೆ ಭೂಮಿ ಸದ್ದಿಲ್ಲದೆ ವಕ್ಫ್‌ಗೆ ವರ್ಗಾವಣೆಯಾದದ್ದು ಹೇಗೆ ಎಂಬ ಪ್ರಶ್ನೆ
ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಕಾಯ್ದೆಯ ಬಿಸಿ ಇದೀಗ ಧಾರವಾಡ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಿಸ್ತರಿಸಿದೆ. ಧಾರವಾಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೂರಾರು ರೈತರ ಕೃಷಿಭೂಮಿ ಅವರಿಗರಿವಿಲ್ಲದೆ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಕಂದಾಯ ಇಲಾಖೆಯಿಂದ ನೋಟಿಸ್ ಬಂದ ಬಳಿಕ ಎಚ್ಚೆತ್ತಿರುವ ಇಲ್ಲಿನ ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡದಲ್ಲಿ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿರುವುದು ಬೆಳಕಿಗೆ ಬಂದಿದೆ. ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರುವ ರೈತರ ಹೊಲಗಳ ಪಹಣಿಯ 11ನೇ ಇತರ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ‘ಸದರಿ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ದಾಖಲಾಗಿದೆ. ತಮ್ಮ ಪಿತ್ರಾರ್ಜಿತ ಆಸ್ತಿಯಾದ ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ದಾಖಲಾಗಿರುವುದು ರೈತರಲ್ಲಿ ದಿಗಿಲು ಹುಟ್ಟಿಸಿದೆ.
ವಕ್ಫ್ ಎಂದು ದಾಖಲಾಗಿರುವುದನ್ನು ನೋಡಿದ ರೈತರು ಮುಂದೇನು ಮಾಡಬೇಕು ಎಂದು ತೋಚದೆ ತೊಳಲಾಡುತ್ತಿದ್ದಾರೆ. ವಕ್ಫ್ ಎಂದರೇನು? ಅದೆಲ್ಲಿದೆ? ನಮ್ಮ ಜಮೀನಿನ ಪಹಣಿಯಲ್ಲಿ ಅದರ ಹೆಸರೇಕಿದೆ? ಎಂದು ಮುಗ್ಧ ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ರೈತರ ಭೂಮಿ ಪಹಣಿ ಕಾಲಂ ನಂಬರ್ 11ರಲ್ಲಿ ವಕ್ಫ್ ಎಂದು ನಮೂದಾಗಿದ್ದು ಸಾವಿರಾರು ಎಕರೆ ಕೃಷಿಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ಯಾದಗಿರಿ ಜಿಲ್ಲೆಯ 1440 ರೈತರ ಕೃಷಿಭೂಮಿ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಇಲ್ಲಿ ವಂಶಪಾರಂಪರಿಕವಾಗಿ ರೈತರು ಉಳುಮೆ ಮಾಡುತ್ತಿದ್ದರು. ಅವರ ವಂಶದವರ ಹೆಸರೇ ಪಹಣಿಯಲ್ಲಿ ಇತ್ತು. ಇದೀಗ ದಿಢೀರ್ ಆಗಿ ಪಹಣಿಯಲ್ಲಿ ವಕ್ಫ್ ಎಂದು ದಾಖಲಾಗಿರುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿದೆ. ರೈತರ ಜಮೀನಿನ ಬಳಿ ಯಾವುದೇ ದರ್ಗಾ, ಮಸೀದಿಗಳು ಇಲ್ಲದಿದ್ದರೂ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ರೈಲ್ವೇ ಕಾಮಗಾರಿ ಪರಿಹಾರ ಹಣ ಪಡೆಯಲು ಮುಂದಾದಾಗ 2020ರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಈ ಅವಾಂತರವನ್ನು ಸರಿಪಡಿಸುವ ಕುರಿತು ಈಗಾಗಲೇ ರೈತರು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಕಚೇರಿ ಸಂಪರ್ಕಿಸಿದರೆ ವಕ್ಫ್ ಕಚೇರಿಯಲ್ಲಿ ಕೇಳಿ ಎನ್ನುತ್ತಿದ್ದಾರೆ. ಜಿಲ್ಲಾ ವಕ್ಫ್ ಕಚೇರಿ ಸಂಪರ್ಕಿಸಿದರೆ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಿಸಿ ಎನ್ನುತ್ತಿದ್ದಾರೆ. ಅವರನ್ನು ಕೇಳಿದರೆ ಇವರು, ಇವರನ್ನು ಕೇಳಿದರೆ ಅವರು ಎಂದು ತಮ್ಮನ್ನು ಅಲೆದಾಡಿಸುತ್ತಿದ್ದಾರೆ ಎಂಬುದು ರೈತರ ಆರೋಪ. ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದರೆ ಮುಂದೇನು ಮಾಡಬೇಕೆಂದು ತಿಳಿಯದೇ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಈ ರೈತರದ್ದಷ್ಟೇ ಸಮಸ್ಯೆಯಲ್ಲ. ಇಂಥ ಅನೇಕ ಪ್ರಕರಣಗಳು ನಡೆದಿದ್ದು, ಬಹುತೇಕ ಪ್ರಕರಣಗಳು ರೈತರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಆತಂಕಗೊಂಡಿರುವ ರೈತರು ಇದೀಗ ತಮ್ಮ ಪಹಣಿಗಳನ್ನು ಪರಿಶೀಲಿಸಲು ಸಂಬಂಧಿಸಿದ ಕಚೇರಿಗಳತ್ತ ದೌಡಾಯಿಸುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ರೈತರು ವಿನಾಕಾರಣ ಪರದಾಡುವಂತಾಗಿದೆ.