2021ರಲ್ಲಿ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ
ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಜನಗಣತಿ ಪ್ರಕ್ರಿಯೆ 2025ರಲ್ಲಿ ಆರಂಭಗೊಂಡು 2026ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿ ಸಹ ಜಾರಿಗೆ ಬರಲಿದೆ.
ಈಗಾಗಲೇ ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ಭಾರತಕ್ಕೆ ಇದರಿಂದ ಅನ್ಯಾಯವಾಗಲಿದೆ ಎನ್ನಲಾಗುತ್ತದೆ. ದಕ್ಷಿಣ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಬಹುದು ಇಲ್ಲದೆ ಯಥಾಸ್ಥಿತಿ ಮುಂದುವರಿಯಬಹುದು. ಆದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ದೇಶದ ರಾಜಕೀಯದಲ್ಲಿ ಉತ್ತರ ಭಾರತದ ರಾಜ್ಯಗಳ ಪ್ರಾಬಲ್ಯ ಮುಂದುವರಿಯುತ್ತದೆ ಎನ್ನುವುದು ದಕ್ಷಿಣ ಭಾರತೀಯರ ಕಳವಳ.