ಪುತ್ತೂರು: ಬೀಡಿ ಕಳ್ಳತನ ಆರೋಪದಲ್ಲಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ.
ಆರೋಪಿಯು ಎರಡು ವರ್ಷಗಳ ಹಿಂದೆ ಪುತ್ತೂರಿನ ಬೀಡಿ ಬ್ರಾಂಚೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿಗಳನ್ನು ಕದ್ದು ಸಿಕ್ಕಿ ಹಾಕಿಕೊಂಡಿದ್ದ.
ಬಂಧಿತ ಆರೋಪಿ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್ ಕುಂಞಿ ಎಂದು ಗುರುತಿಸಲಾಗಿದೆ. 2022ರಲ್ಲಿ ಕೂರ್ನಡ್ಕದ ಬೀಡಿ ಬ್ರಾಂಚೊಂದರಲ್ಲಿ ಸುಮಾರು 22 ಸಾವಿರ ರೂಪಾಯಿ ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಕೋರ್ಟ್ ಆತನ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿತ್ತು. ಪುತ್ತೂರು ನಗರ ಠಾಣೆಯ ಇನ್ಸೆಕ್ಟರ್ ಜಾನ್ಸನ್ ಡಿಸೋಜ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ವಸಂತ ಗೌಡ ಮತ್ತು ಬಸವರಾಜು ತನಿಖೆ ನಡೆಸಿ, ಆರೋಪಿಯನ್ನು ಉಳ್ಳಾಲದ ಕೆ.ಸಿ.ರೋಡ್ ಬಳಿ ಬಂಧಿಸಿದ್ದಾರೆ.