ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ

ಮಾರ್ಕ್ ಇಂಗ್ಲಿಸ್ ಬದುಕು ಯಾರಿಗಾದರೂ ಸ್ಫೂರ್ತಿ ನೀಡಬಲ್ಲದು

ಈ ವ್ಯಕ್ತಿಯ ಬದುಕು ಮತ್ತು ಸಾಧನೆಗಳು ನಮಗೆ ಖಂಡಿತ ಸ್ಫೂರ್ತಿ ತುಂಬುವ ಶಕ್ತಿ ಹೊಂದಿದೆ.
ಆತನನ್ನು ನಿಮಗೆ ಹೇಗೆ ಪರಿಚಯ ಮಾಡಲಿ? ಅವನೊಬ್ಬ ಪರ್ವತಾರೋಹಿ, ಸಾಹಸಿ, ಉದ್ಯಮಿ, ಲೇಖಕ, ಸೈಕ್ಲಿಸ್ಟ್, ಸಂಶೋಧಕ ಮತ್ತು ಖಂಡಿತವಾಗಿಯು ಅದ್ಭುತ ಸಾಧಕ.

ಆತನ ಕಥೆ ಆರಂಭ ಆಗೋದು ಹೀಗೆ…































 
 

ಆತ ನ್ಯೂಜಿಲ್ಯಾಂಡ್ ದೇಶದವನು. ಹುಟ್ಟಿದ್ದು 1959 ಸೆಪ್ಟೆಂಬರ್ 27ರಂದು. ಆತನಿಗೆ ಬಾಲ್ಯದಿಂದ ಸಾಹಸಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ. ಪರ್ವತಾರೋಹಣ, ಟ್ರೆಕ್ಕಿಂಗ್ ಇವೆಲ್ಲವೂ ಅವನ ಬದುಕಿನ ಪ್ಯಾಶನ್ ಆಗಿದ್ದವು. ಅದಕ್ಕೆ ಹೊಂದಿಕೊಳ್ಳುವ ಉದ್ಯೋಗ ಅವನಿಗೆ ದೊರಕಿತ್ತು.

ಅವನ ದೇಶದಲ್ಲಿ ಹಿಮಾವೃತವಾದ ಶಿಖರದಲ್ಲಿ ಒಂದು ನೇಷನಲ್ ಪಾರ್ಕ್ ಇತ್ತು. ಅದು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರ ಇತ್ತು. ಅದರ ಹೆಸರು ಮೌಂಟ್ ಕುಕ್ ನೇಷನಲ್ ಪಾರ್ಕ್. ಅದನ್ನು ಏರುವ ಆರೋಹಿಗಳಿಗೆ ರಕ್ಷಣೆ ನೀಡುವ ಪಡೆಯಲ್ಲಿ ಅವನಿಗೊಂದು ಉದ್ಯೋಗ ದೊರಕಿತು. ಅತ್ಯಂತ ಕಡಿದಾದ ಹಿಮದ ಪರ್ವತ ಅದು.

1982ರ ಒಂದು ದಿನ ನಡೆಯಬಾರದ್ದು ನಡೆದು ಹೋಯಿತು

ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಅವನು ಅದೇ ಶಿಖರವನ್ನು ಏರುತ್ತಿರುವಾಗ ಭಾರಿ ಹಿಮಪಾತ ಆಯಿತು. ಅವನು ಮತ್ತು ಅವನ ಗೆಳೆಯ ಫಿಲಿಪ್ ಡೂಲ್ ಇಬ್ಬರೂ ಒಂದು ಹಿಮದ ಗುಹೆಯಲ್ಲಿ ಸಿಕ್ಕಿ ಹಾಕಿಕೊಂಡರು. ಒಟ್ಟು 47 ದಿನಗಳ ಕಾಲ ಅವರಿಗೆ ಬಾಹ್ಯ ಪ್ರಪಂಚದ ಸಂಪರ್ಕವೇ ಇರಲಿಲ್ಲ. ಆಹಾರ, ನಿದ್ರೆ, ವಿಶ್ರಾಂತಿ ಯಾವುದೂ ಇರಲಿಲ್ಲ. ಅವರ ಎರಡೂ ಕಾಲುಗಳು ಸೊಂಟದವರೆಗೆ ಹಿಮದಲ್ಲಿ ಹೂತು ಹೋಗಿದ್ದವು.
ಹಿಮಪಾತ ನಿಂತು ಅವರು ಗುಹೆಯಿಂದ ಹೊರಗೆ ಬಂದಾಗ ಏನೋ ಕೊಳೆತ ವಾಸನೆಯು ಬರಲು ಆರಂಭ ಆಯಿತು. ಕಾಲುಗಳು ಪೂರ್ತಿ ಸ್ವಾಧೀನ ತಪ್ಪಿದ ಅನುಭವ.
ಹೌದು, ಅವರ ಎರಡೂ ಕಾಲುಗಳು ಹಿಮದಲ್ಲಿ ಸಿಲುಕಿ ರಕ್ತ ಸಂಚಾರ ಇಲ್ಲದೆ ಕೊಳೆತು ಹೋಗಿದ್ದವು. ಅವರಿಬ್ಬರ ಎರಡೂ ಕಾಲುಗಳನ್ನು ವೈದ್ಯರು ಮೊಣಗಂಟಿನವರೆಗೆ ಕತ್ತರಿಸಿ ತೆಗೆಯಬೇಕಾಯ್ತು. ಆಗ ಮಾರ್ಕ್ ಇಂಗ್ಲಿಸ್ ವಯಸ್ಸು ಕೇವಲ 23.

ಯಮಯಾತನೆ, ಅಸಹನೀಯ ಪರಾವಲಂಬಿ ಬದುಕು

ಒಂದೆಡೆ ಅಪಾರವಾದ ನೋವು. ಇನ್ನೊಂದೆಡೆ ನೂರಾರು ಕನಸುಗಳು ಛಿದ್ರವಾದ ಅನುಭವ. ಮಾರ್ಕ್ ಹತ್ತಾರು ವರ್ಷಗಳನ್ನು ಹಾಸಿಗೆಗೆ ಒರಗಿ ಕಳೆಯಬೇಕಾಯಿತು. ಆಗ ಅವನ ಹೆಂಡತಿ ಆನ್ನಿ ಆತನ ನೆರವಿಗೆ ನಿಂತಳು. ಈ ಅಸಹನೀಯ ಸ್ಥಿತಿಯಲ್ಲಿ ಕೂಡ ಆತನ ಕ್ರಿಯಾತ್ಮಕವಾದ ಮೆದುಳು ಹೆಚ್ಚು ತೀವ್ರವಾಗಿ ಯೋಚನೆ ಮಾಡಲು ಆರಂಭ ಆಯಿತು.

ಅದೇ ಸ್ಥಿತಿಯಲ್ಲಿ ಅವನು ತನ್ನ ದೇಶದ ಪ್ರಸಿದ್ಧ ಲಿಂಕನ್ ಯೂನಿವರ್ಸಿಟಿ ಮೂಲಕ ಬಯೋಕೆಮಿಸ್ಟ್ರೀಯಲ್ಲಿ ಪದವಿ ಸಂಪಾದನೆ ಮಾಡುತ್ತಾನೆ. ಸತತ ಹಲವು ಪುಸ್ತಕಗಳನ್ನು ಓದುತ್ತಾನೆ. ಸಂಶೋಧನೆಗೆ ಇಳಿಯುತ್ತಾನೆ. ತನ್ನದೇ ಆದ ಉದ್ಯಮವನ್ನು ಆರಂಭ ಮಾಡುತ್ತಾನೆ.

ಕೃತಕ ಕಾಲು ಜೋಡಿಸಿ ಮತ್ತೆ ಸಾಹಸ ಆರಂಭ

ಎರಡೂ ಕಾಲುಗಳಿಗೆ ಕೃತಕ ಕಾಲುಗಳನ್ನು ಜೋಡಿಸಿದ ಮಾರ್ಕ್ ಮೊದಲು ಯಾವ ಆಧಾರವಿಲ್ಲದೆ ನಡೆಯಲು ಕಲಿಯುತ್ತಾನೆ. ನಿಧಾನವಾಗಿ ಓಡಲು ಕಲಿಯುತ್ತಾನೆ. ಸಣ್ಣ ಪುಟ್ಟ ಬೆಟ್ಟಗಳನ್ನು ಮತ್ತೆ ಏರಲು ಆರಂಭ ಮಾರುತ್ತಾನೆ. ಸೈಕ್ಲಿಂಗ್ ಕೂಡ ಕಲಿಯುತ್ತಾನೆ. ತನ್ನ ಕಾಲುಗಳು ಕೃತಕ ಎಂಬುದನ್ನು ಪೂರ್ತಿ ಮರೆಯುತ್ತಾನೆ.

ಹಿಮ ಪರ್ವತಗಳಲ್ಲಿ ಜಾರಿಕೊಂಡು ಹೋಗುವ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಪಾಲುಗೊಳ್ಳುತ್ತಾನೆ. ತನ್ನ ಅದ್ಭುತ ಆತ್ಮವಿಶ್ವಾಸ ಮತ್ತು ಸಂಕಲ್ಪ ಶಕ್ತಿಯಿಂದ ಒಂದೊಂದೇ ಸಾಹಸಗಳನ್ನು ಮತ್ತೆ ಆರಂಭ ಮಾಡುತ್ತಾನೆ.

2000ರ ಒಲಿಂಪಿಕ್ಸ್‌ನಲ್ಲಿ ಮೆಡಲ್ ಬಂತು

2000ರ ಸಿಡ್ನಿ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಾರ್ಕ್ ಇಂಗ್ಲೀಸ್ ಬೆಳ್ಳಿಯ ಪದಕ ಗೆದ್ದುಕೊಂಡಾಗ ಆತನ ಬಗ್ಗೆ ಪ್ರಮುಖ ಪತ್ರಿಕೆಗಳು ಬಹುದೊಡ್ಡ ಸ್ಟೋರಿಯನ್ನು ಬರೆಯುತ್ತವೆ. ಇಡೀ ಜಗತ್ತು ಮಾರ್ಕ್ ಸಾಧನೆಗಳನ್ನು ದೊಡ್ಡದಾಗಿ ಗಮನಿಸಲು ಆರಂಭ ಮಾಡುತ್ತದೆ.

ಮುಂದಿನ ವರ್ಷ ಆತ ಅಂತಾರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುದೊಡ್ಡ ಸಾಧನೆ ದಾಖಲು ಮಾಡುತ್ತಾನೆ. 2002ರಲ್ಲಿ ತನ್ನ ಕಾಲು ಕತ್ತರಿಸಲು ಕಾರಣ ಆದ ಮೌಂಟ್ ಕುಕ್ ಹಿಮ ಪರ್ವತವನ್ನು ಮತ್ತೆ ಏರುತ್ತಾನೆ. ಎರಡು ವರ್ಷಕ್ಕೊಮ್ಮೆ ಹೊಸ ಹೊಸ ದಾಖಲೆಗಳನ್ನು ಮಾಡುತ್ತಾ ಎಲ್ಲರೂ ವಿಸ್ಮಯ ಪಡುವಂತೆ ಮಾಡುತ್ತಾನೆ.

2004ರಲ್ಲಿ ‘ಚೋ ಓಯು’ ಶಿಖರ ಒಲಿಯಿತು

ಮಾರ್ಕ್ ಸಾಧನೆಗೆ ಈಗ ಮಿತಿಯೇ ಇರಲಿಲ್ಲ. 2004ರ ತನ್ನ ಹುಟ್ಟುಹಬ್ಬದ ದಿನ ಜಗತ್ತಿನ ಆರನೇ ಅತಿ ಎತ್ತರದ ಶಿಖರವಾದ ‘ಚೋ ಓಯು’ ಅವನು ಗೆದ್ದಾಗಿತ್ತು. ಕೃತಕ ಕಾಲುಗಳಿಂದ ಆತ ಆ ಶಿಖರ ಏರಿದ ಜಗತ್ತಿನ ಮೊದಲ ವ್ಯಕ್ತಿಯಾಗಿ ದಾಖಲೆ ಬರೆದಿದ್ದ.

ಇನ್ನೊಂದೇ ಶಿಖರ ಬಾಕಿ, ಅದು ಮೌಂಟ್ ಎವರೆಸ್ಟ್

ನಾನು ಹೇಳುತ್ತಾ ಹೋಗುವುದು ಸುಲಭ. ಆದರೆ ಕೃತಕ ಕಾಲುಗಳಿಂದ ಬ್ಯಾಲೆನ್ಸ್ ಮಾಡಿ, ಕ್ಲಿಫ್ ಹ್ಯಾಂಗರ್ ಮೂಲಕ ದೇಹವನ್ನು ಎತ್ತಿ ಹಿಮಶಿಖರ ಏರುವುದು ಖಂಡಿತ ಸುಲಭ ಅಲ್ಲ. ಆದರೆ ಆತನ ಎಣೆಯಿಲ್ಲದ ಇಚ್ಛಾಶಕ್ತಿಗೆ ಅಸಾಧ್ಯ ಯಾವುದು?

2006ರಲ್ಲಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಪ್ರಯತ್ನ ಆರಂಭ ಆಯಿತು. ಕನಸು ದೊಡ್ಡದಿತ್ತು. ಆದರೆ ಸವಾಲುಗಳು ಶಿಖರದಷ್ಟೆ ಎತ್ತರ ಇದ್ದವು.

ಅದುವರೆಗೆ ಕಾಲಿಲ್ಲದ ವ್ಯಕ್ತಿ ಯಾರೂ ಆ ಶಿಖರ ಏರಿರಲಿಲ್ಲ. ಅದ್ದರಿಂದ ನೋಂದಣಿ ತುಂಬಾ ಕಷ್ಟ ಆಯಿತು. ಶೆರ್ಫಾಗಳು ತರಬೇತು ಕೊಡಲು ಹಿಂದೆಮುಂದೆ ನೋಡಿದರು. ರೆಸ್ಕ್ಯೂ ಸಪೋರ್ಟ್ ದೊರೆಯಲಿಲ್ಲ. ಕೊನೆಗೆ ತನಗೆ ಏನಾದರೂ ನಾನೇ ಹೊಣೆ ಎಂದು ಬರೆದು ಸಹಿ ಮಾಡಿಕೊಟ್ಟ ಮೇಲೆ ಅನುಮತಿ ದೊರೆಯಿತು.

47 ದಿನಗಳ ಆ ಆರೋಹಣ…

2006 ಏಪ್ರಿಲ್ ತಿಂಗಳಲ್ಲಿ ಆತನ ಸಾಹಸ ಆರಂಭ ಆಯಿತು. ಕೃತಕ ಕಾಲುಗಳಲ್ಲಿ ಏರುವುದು ಬಹಳ ಕಷ್ಟ ಆಗುತ್ತಿತ್ತು. ಅದರಲ್ಲೂ ಆಗ ಆತನಿಗೆ 47 ವರ್ಷ ದಾಟಿತ್ತು. ಮನಸು ಹೇಳಿದ್ದನ್ನು ದೇಹ ಕೇಳುತ್ತಿರಲಿಲ್ಲ. ಆದರೆ ಗೆಲ್ಲಬೇಕು ಎನ್ನುವ ತೀವ್ರ ಹಂಬಲ ಇದೆಯಲ್ಲ, ಅದಕ್ಕೆ ಸೋಲಿದೆಯಾ?

6400 ಮೀಟರ್ ಎತ್ತರ ಏರಿ ನಿಂತಾಗ ಆತನ ಒಂದು ಕಾಲಿನ ಕೃತಕ ಕಾಲು ಅರ್ಧ ತುಂಡಾಯಿತು. ಆತನ ಜೊತೆಗೆ ಇದ್ದ ಶೇರ್ಫಾಗಳು ಸಾಕು, ಹಿಂದೆ ಹೋಗೋಣ ಎಂದರು. ಆದರೆ ಮಾರ್ಕ್ ಕೇಳಲೇ ಇಲ್ಲ. ಕೃತಕ ಕಾಲನ್ನು ಮತ್ತೆ ಫಿಟ್ ಮಾಡುವ ಎಲ್ಲ ಪ್ರಯತ್ನಗಳು ಸೋತವು. ಕೊನೆಗೆ ಬೇಸ್ ಕ್ಯಾಂಪನಿಂದ ಇನ್ನೊಂದು ಕೃತಕ ಕಾಲು ತರಿಸಿ ಜೋಡಿಸಿದ ನಂತರ ಆತನ ಪ್ರಯಾಣ ಮುಂದುವರಿಯಿತು.

2006 ಮೇ 15ರಂದು ಮೌಂಟ್ ಎವರೆಸ್ಟ್ ಆತನ ಪಾದಗಳ ಕೆಳಗಿತ್ತು

ಅದಮ್ಯ ಉತ್ಸಾಹ, ದಣಿವು ಇಲ್ಲದ ಚೇತನ ಮತ್ತು ಎಂದೂ ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿಯ ಮುಂದೆ ಮೌಂಟ್ ಎವರೆಸ್ಟ್ ಅಂದು ಶರಣಾಗಿತ್ತು. ಮೇ 15ರಂದು ಎವರೆಸ್ಟ್ ಶಿಖರವೆ ಮಾರ್ಕ್ ಇಂಗ್ಲಿಸ್ ಕಾಲುಗಳ ಕೆಳಗಿತ್ತು. ಎರಡೂ ಕಾಲುಗಳಿಲ್ಲದೆ ಕೃತಕ ಕಾಲುಗಳಿಂದ ಮೌಂಟ್ ಎವರೆಸ್ಟ್ ಏರಿ ನಿಂತ ಜಗತ್ತಿನ ಮೊದಲ ವ್ಯಕ್ತಿಯಾಗಿ ಆತನ ಹೆಸರು ದಾಖಲಾಗಿತ್ತು.

ಮುಂದೆ ಮಾರ್ಕ್ ಇಂಗ್ಲೀಸ್ ಮೋಟಿವೇಶನಲ್ ಸ್ಪೀಕರ್ ಆಗಿ ಬದಲಾಗುತ್ತಾನೆ. ಆವನ ಮಾತುಗಳ ವೀಡಿಯೊ ನೋಡುವಾಗ, ಕೇಳುವಾಗ ರೋಮಾಂಚನ ಆಗುತ್ತದೆ. ಅವನು ತನ್ನದೇ ಬದುಕಿನ ಹೋರಾಟದ ಕತೆಯನ್ನು ಹೇಳುತ್ತಾ ಹೋಗುವುದರಿಂದ ರೋಮಾಂಚನ ಸ್ಫೋಟ ಆಗುತ್ತದೆ.

ಆತ ಹಲವಾರು ಬಾರಿ ಭಾರತಕ್ಕೂ ಬಂದು ಹಲವು ಕಡೆ ಭಾಷಣ ಮಾಡಿ ಹೋಗಿದ್ದಾನೆ. ತನ್ನ ಸಾಹಸದ ಮೇಲೆ ನಾಲ್ಕು ಪುಸ್ತಕಗಳನ್ನು ಬರೆದಿದ್ದಾನೆ. ‘ನೋ ಲೆಗ್ಸ್ ಆನ್ ಎವರೆಸ್ಟ್’ ಆತನ ಅತ್ಯಂತ ಜನಪ್ರಿಯ ಪುಸ್ತಕ.

ತನ್ನ ಅದ್ಭುತ ಆತ್ಮವಿಶ್ವಾಸ ಮತ್ತು ಸಾಹಸಗಳ ಮೂಲಕ ಮಾರ್ಕ್ ಇಂಗ್ಲಿಸ್ ನಮಗೆಲ್ಲ ಪ್ರೇರಣೆ ಆಗಿ ನಿಲ್ಲುತ್ತಾನೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top