ವಿಷಾದಭಾವವಿಲ್ಲದೆ ಗುಡ್‌ಬೈ ಹೇಳಿ

ಈ ಜಗತ್ತಿನಿಂದ ನಿರ್ಗಮಿಸುವ ಹೊತ್ತಿನಲ್ಲಿ ನಮಗೆ ಈ 25 ವಿಷಾದಗಳು ಇಲ್ಲದಿರಲಿ

1) ನಮ್ಮ ಬಾಲ್ಯದ ಗೆಳೆಯರನ್ನು ಮತ್ತೆ ಕನೆಕ್ಟ್ ಮಾಡಲು ಆಗಲಿಲ್ಲವಲ್ಲ ಎಂಬ ನೋವು.

2) ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲವಲ್ಲ ಎಂಬ ವಿಷಾದ.































 
 

3) ನಮ್ಮ ಪ್ರೀತಿಪಾತ್ರರಿಗೆ ಕೊಟ್ಟ ಯಾವುದೋ ಭರವಸೆಯನ್ನು ಈಡೇರಿಸಲು ಆಗದೇ ಹೋದ ಹತಾಶೆ.

4) ನಮ್ಮ ಕುಟುಂಬಕ್ಕೆ ಸಮಯ ಮತ್ತು ಪ್ರೀತಿ ಹಂಚಲು ಆಗದಷ್ಟು ಒತ್ತಡ ಮಾಡಿಕೊಂಡು ಬದುಕಿದ ಖಾಲಿತನ.

5) ನಮ್ಮ ಶಿಕ್ಷಣ ಪೂರ್ತಿ ಮಾಡಿದ ನಂತರ ನಮ್ಮ ಗುರುಗಳನ್ನು ಭೇಟಿ ಮಾಡಲು ಸಾಧ್ಯವಾಗದೆ, ಅವರಿಗೆ ಕೃತಜ್ಞತೆ ಹೇಳಲು ಕೂಡ ಸಾಧ್ಯವಾಗದೇ ಹೋದ ವ್ಯಥೆ.

6) ಹದಿಹರೆಯದಲ್ಲಿ ಪ್ರೀತಿ ಮಾಡಿದ ಹುಡುಗ/ಹುಡುಗಿಗೆ ಧೈರ್ಯವಾಗಿ ಪ್ರಪೋಸ್ ಮಾಡಲು ಆಗದೇ ಹೋದ ಹೇಡಿತನ.

7) ಒಲಿದು ಬಂದ ಹುಡುಗ/ಹುಡುಗಿಯು ಗುಲಾಬಿ ಹಿಡಿದು ಕಣ್ಣ ಮುಂದೆ ನಿಂತಾಗಲೂ ಸ್ವೀಕಾರ ಮಾಡಲು ಆಗದೇ ನೆಲ ನೋಡುತ್ತಾ ನಿಂತ ನಾಚಿಕೆ.

8) ಯಾರ್ಯಾರದೋ ಅವಕಾಶಗಳನ್ನು ಕಿತ್ತುಕೊಂಡು ಅವುಗಳನ್ನು ನಮ್ಮ ಉಡ್ಡಯನ ವೇದಿಕೆ ಮಾಡಿಕೊಂಡ ಹುಂಬತನ.

9) ನಮ್ಮ ಹದಿಹರೆಯ ಮತ್ತು ಯೌವ್ವನದಲ್ಲಿ ಚಟಗಳಿಗೆ ಬಲಿಬಿದ್ದು ನಮ್ಮ ಜೀವನದ ಅಮೂಲ್ಯ ವರ್ಷಗಳನ್ನು ವ್ಯರ್ಥ ಮಾಡಿಕೊಂಡ ಧಿಮಾಕು.

10) ಇಳಿಹರೆಯದಲ್ಲಿ ಆತ್ಮಚರಿತ್ರೆ ಬರೆಯಲು ಕೂತಾಗ ಛೇ ನಾನು ಡೈರಿ ಬರೆಯಬೇಕಿತ್ತು, ಈಗೆಲ್ಲವೂ ಮರೆತು ಹೋಗಿದೆಯಲ್ಲ ಎಂಬ ನಿರಾಸೆ.

11) ನಮ್ಮ ಜೀವನದ ಸಣ್ಣ ಸಣ್ಣ ಸಂತೋಷಗಳನ್ನು ಸಂಭ್ರಮಿಸಲು ಆಗಲಿಲ್ಲವಲ್ಲ ಎಂಬ ಬೇಸರ.

12) ರಕ್ತವು ಬಿಸಿಯಿದ್ದಾಗ ಮಿತಿಮೀರಿ ದುಡಿದು ನಡುಹರೆಯದಲ್ಲಿ ಲೈಫ್‌ಸ್ಟೈಲ್ ಕಾಯಿಲೆಗಳ ಮೂಟೆಯನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯತೆ.

13) ನಮ್ಮ ಜೀವನದ ಉನ್ನತಿಗೆ ಬೆಂಬಲ ಕೊಟ್ಟ ನೂರಾರು ಮಹನೀಯರಿಗೆ ಒಂದು ಧನ್ಯವಾದ ಹೇಳಲೂ ಆಗದ ಪಾಖಂಡಿತನ.

14) ನಮ್ಮ ಅಂತರಂಗದ ಗೆಳೆಯರು ಮಾಡಿದ ಅನುದ್ದೇಶಿತ ತಪ್ಪುಗಳನ್ನು ಕ್ಷಮಿಸದೆ ಅವರಿಗೆ ನೋವು ಕೊಟ್ಟ ನಮ್ಮ ಧಾರ್ಷ್ಟ್ಯ.

15) ಕ್ರಿಯಾಶೀಲ ಮೆದುಳಿನಲ್ಲಿ ಮೂಡಿದ ಸುಂದರ ಕವಿತೆಗಳನ್ನು, ಕಥೆಗಳನ್ನು ಬರೆದಿಡದೆ ಅವುಗಳನ್ನು ಕಳೆದುಕೊಂಡ ಸೋಮಾರಿತನ.

16) ನಮ್ಮ ಓರಗೆಯ ಗೆಳೆಯರು ಮಾಡಿದ ಒಳ್ಳೆಯ ಕೆಲಸಗಳಿಗೆ ಥ್ಯಾಂಕ್ಸ್ ಹೇಳಲು ಅಡ್ಡಿಯಾದ ಅಹಂ.

17) ಚಂದವಾಗಿ ಹಾಡುವ ಧ್ವನಿ ಇದ್ದರೂ ವೇದಿಕೆಯ ಮೇಲೆ ಹಾಡುವ ಧೈರ್ಯ ಇಲ್ಲದೇ ಕೇವಲ ಬಾತ್‌ರೂಮಿನಲ್ಲಿಯೇ ಹಾಡಲು ಕಾರಣವಾದ ಸ್ಟೇಜ್ ಫೋಬಿಯಾ.

18) ಹದಿಹರೆಯದಲ್ಲಿ ಮಾಡಿದ (ಆಕರ್ಷಣೆಯ) ಪ್ರೀತಿಯನ್ನು ಮುಂದೆ ತನ್ನನ್ನು ಪೂರ್ತಿಯಾಗಿ ನಂಬುವ ಬಾಳಸಂಗಾತಿಯ ಜೊತೆಗೂ ಹೇಳಲಾರದೆ ಉಳಿದ ಸಣ್ಣ ಗಿಲ್ಟ್.

19) ದುಡಿದ ಹಣವನ್ನು ಸರಿಯಾಗಿ ನಿರ್ವಹಣೆ ಮಾಡದೆ ಮಿತಿಮೀರಿದ ಸಾಲವನ್ನು ಮಕ್ಕಳ ಮೇಲೆ ಹೊರಿಸಿ ಈ ಜಗತ್ತನ್ನು ಬಿಟ್ಟುಹೋಗುವ ಜರೂರತ್ತು.

20) ಸಹಜವಾದ ಭಾವನೆಗಳ ಜೊತೆಗೆ ಬದುಕದೆ ಮುಖವಾಡಗಳ ಹಿಂದೆ ಬದುಕು ಸಾಗಿಸಿದ ಇಬ್ಬಂದಿತನ.

21) ಯಾರ್ಯಾರಿಗೋ ಅನವಶ್ಯಕವಾಗಿ ಹೆದರಿ ಸತ್ಯಗಳನ್ನು ಮುಚ್ಚಿಟ್ಟ ಹೇಡಿತನ.

22) ಸಂಪಾದನೆ ಮಾಡಿದ ದುಡ್ಡನ್ನು ಕುಟುಂಬಕ್ಕೆ ವಿನಿಯೋಗ ಮಾಡದೆ, ಸತ್ಕಾರ್ಯಕ್ಕೆ ಖರ್ಚು ಮಾಡದೆ ಬ್ಯಾಂಕ್ ಖಾತೆಗಳಲ್ಲಿ ಕೂಡಿಟ್ಟ ಕಂಜ್ಯೂಸಿತನ.

23) ಕಣ್ಣ ಮುಂದೆ ನಡೆಯುವ ಅನ್ಯಾಯ, ಅನಾಚರಗಳನ್ನು ಖಂಡಿಸಲಾಗದೆ ಮೌನವಾಗಿ ಸಹಿಸಿಕೊಳ್ಳುವ ಹೊಣೆಗೇಡಿತನ.

24) ತಾನು ಸಮಾಜಕ್ಕೆ ಬೋಧನೆ ಮಾಡಿದ ಮೌಲ್ಯಗಳನ್ನು ತಾನೇ ಪಾಲಿಸಲಾಗದ ಸೋಗಲಾಡಿತನ.

25) ನಾವು ಜಗತ್ತನ್ನು ಬಿಟ್ಟುಹೋಗುವಾಗ ನಮ್ಮ ಬಗ್ಗೆ ನಾಲ್ಕು ಒಳ್ಳೆಯ ಸಾಲುಗಳನ್ನು ಫೇಸ್‌ಬುಕ್‌ನಲ್ಲಿ ಬರೆಯಲು ಅರ್ಹತೆ ಇರುವ ಸಜ್ಜನರನ್ನು ಸಂಪಾದನೆ ಮಾಡಲಾಗದ ಹಪಾಹಪಿ.

ಈ 25 ವಿಷಾದಗಳು ಇಲ್ಲದ ನಿರ್ಗಮನವು ನಮಗೆ ದೊರೆಯಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ ಆಗಲಿ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top