ಪುತ್ತೂರು: ಹಿಂದುತ್ವದ ಆಧಾರದಲ್ಲಿ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಸತ್ಯ, ಧರ್ಮ, ನಿಷ್ಠೆಯಿಂದ ಸ್ಥಳೀಯಾಡಳಿತ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಹೀಗೆಂದು ಹೇಳಿದರು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು.
ಪುತ್ತೂರು ಬಿಜೆಪಿ ವತಿಯಿಂದ ಜೈನ ಭವನದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಷ್ಟು ವರ್ಷಗಳ ಕಾಲ ಬಿಜೆಪಿಗಾಗಿ, ಹಿಂದುತ್ವಕ್ಕಾಗಿ ಸಮಯದ ನೀಡಿದ ನನಗೆ ಈ ಜವಾಬ್ದಾರಿ ಸಿಕ್ಕಿದೆ. ಈ ನಿಟ್ಟಿನಲ್ಲಿ ವಿಜಯೋತ್ಸವ ಸಂದರ್ಭ ನನಗೆ ಹಾಕಿದ ಹೂವಿನ ಹಾರದ ಒಂದೊಂದು ಎಸಳುಗಳನ್ನು ವ್ಯರ್ಥ ಮಾಡದೆ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು, ಜನರ ಸೇವೆಯನ್ನು ದೇವರ ಸೇವೆ ಎಂದು ತಿಳಿದು ಕೆಲಸ ಕಾರ್ಯಗಳನ್ನು ಮಾಡಿ ಸ್ಥಳೀಯಾಡಳಿತಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.
ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ, ಹುಟ್ಟಿದ ಊರಲ್ಲಿ ಸಿಗುವ ಅಭಿನಂದನೆಯಿಂದ ಸಂತೋಷ ಬೇರೆಲ್ಲೂ ಸಿಗಲ್ಲ. ಈ ನಿಟ್ಟಿನಲ್ಲಿ ಕಿಶೋರ್ ಕುಮಾರ್ ಪುತ್ತೂರು ಇಂದು ಅಭಿನಂದನೆ ಸ್ವೀಕರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನಕ್ಕೆ ವಿಧೇಯನಾಗಿ ಬದ್ಧತೆಯಿಂದ ಕೆಲಸ ಮಾಡಿದ್ದರೆ ಅದು ಬಿಜೆಪಿ ಪಕ್ಷ. ಭ್ರಷ್ಟಾಚಾರವೇ ಮೂಲಮಂತ್ರವನ್ನಾಗಿಸಿದ ಕಾಂಗ್ರೆಸ್ ಗೆ ಇಂದು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ ಈ ಚುನಾವಣೆಯಲ್ಲಿ ಜನತೆ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ದ.ಕ.ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಪರ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುವ ಸಮರ್ಥ ಯುವ ನಾಯಕ ಕಿಶೋರ್ ಕುಮಾರ್ ಪುತ್ತೂರು. ಹಿಂದುತ್ವ ಪರ ಧ್ವನಿಎತ್ತುವ ಕೆಲಸ ಮಾಡಿಕೊಂಡು ಬಂದಿರುವ ಕಿಶೋರ್ ಅವರಿಂದ ಪುತ್ತೂರಿಗೆ ಬಲ ಬಂದಿದೆ. ನಂಬಿಕೆ-ಸಂಪರ್ಕ ಇದ್ದರೆ ಯಾವುದೇ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಪುತ್ತೂರಿನ ಕಾರ್ಯಕರ್ತರು ಈ ಚುನಾವಣೆಯಲ್ಲಿ ಮಾಡಿ ತೋರಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿನಾರಾಯಣ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಚುನಾವಣಾ ಸಹಸಂಚಾಲಕ ಸಂತೋಷ್ ಕೈಕಾರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್.ಗೌರಿ ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಸ್ಥಿತರಿದ್ದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಸ್ವಾಗತಿಸಿದರು. ಜಿಲ್ಲಾ ಬಿಜೆಪಿಯ ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನಾ ಸಮಾರಂಭದ ಮೊದಲು ದರ್ಬೆ ವೃತ್ತದಿಂದ ವಿಜಯೋತ್ಸವ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಕಿಶೋರ್ ಕುಮಾರ್ ಪುತ್ತೂರು ಪ್ರಾರ್ಥನೆ ಸಲ್ಲಿಸಿ ಸೇವೆ ಸಲ್ಲಿಸಿದರು.